ಸಿಎಂ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ದೇಶವನ್ನು ಪೋಲಿಯೋ ಮುಕ್ತವಾಗಿಡುವ ಸಂಕಲ್ಪದೊಂದಿಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತ ಚಾಲನೆ ನೀಡಿದರು. ಬೆಂಗಳೂರಿನ ತಮ್ಮ ನಿವಾಸದಲ್ಲೇ ರಾಜ್ಯ ಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 0 ರಿಂದ 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಪೋಷಕರಿಗೆ ಮನವಿ ಮಾಡಿದರು.


ಪಲ್ಸ್ ಪೋಲಿಯೋ ಅಭಿಯಾನದ ಕುರಿತು ಮಾತನಾಡಿದ ಅವರು, “ನನ್ನ ಮೊಮ್ಮಗಳಿಗೆ ಕೇವಲ ಒಂದು ತಿಂಗಳು ವಯಸ್ಸು. ಅವಳಿಗೂ ಪೋಲಿಯೋ ಲಸಿಕೆ ಹಾಕಿಸಬಹುದು. ಆದ್ದರಿಂದ ನನ್ನ ಮನೆಯಲ್ಲೇ ಕಾರ್ಯಕ್ರಮ ಆಯೋಜಿಸಿದ್ದಾರೆ. ನಾವು ಎಲ್ಲರಿಗೂ ಮಾದರಿಯಾಗಬೇಕು,” ಎಂದು ಹೇಳಿದರು.
ಪೋಲಿಯೋ ನಿರ್ಮೂಲನೆಗಾಗಿ ದೇಶದಲ್ಲಿ ನಡೆದ ಐತಿಹಾಸಿಕ ಪ್ರಯತ್ನಗಳನ್ನು ಸ್ಮರಿಸಿದ ಮುಖ್ಯಮಂತ್ರಿ, ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಅಭಿಯಾನಕ್ಕೆ ವೇಗ ದೊರೆಯಿತು ಹಾಗೂ ಡಾ. ಮನಮೋಹನ್ ಸಿಂಗ್ ಅವರ ಪ್ರಧಾನಮಂತ್ರಿತ್ವದ ಅವಧಿಯಲ್ಲಿ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಲಾಯಿತು ಎಂದು ತಿಳಿಸಿದರು.ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಮಕ್ಕಳ ಆರೋಗ್ಯದ ರಕ್ಷಣೆಗೆ ನಿರಂತರವಾಗಿ ಲಸಿಕೆ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಈ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳಬಾರದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಅಭಿಯಾನದ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ, 36,686 ಪೋಲಿಯೋ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 980 ಸಂಚಾರಿ ತಂಡಗಳು ಹಾಗೂ 7,000ಕ್ಕೂ ಹೆಚ್ಚು ಲಸಿಕಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ದೂರದ ಹಳ್ಳಿಗಳು, ಗುಡ್ಡಗಾಡು ಪ್ರದೇಶಗಳು ಸೇರಿದಂತೆ ರಾಜ್ಯದ ಪ್ರತಿಯೊಂದು ಮಗುವಿಗೂ ಲಸಿಕೆ ತಲುಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.

ಆರೋಗ್ಯ ಕ್ಷೇತ್ರದ ಸಾಧನೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ವೈದ್ಯರಿದ್ದು, ರಾಜ್ಯದಲ್ಲೂ ಸಾವಿರಾರು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜನಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕಾಗಿ ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಜನರ ಸಹಕಾರವೂ ಅತ್ಯಗತ್ಯ ಎಂದು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!