ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಸಾರ್ವಜನಿಕರ ವಿನೂತನ ಪ್ರತಿಭಟನೆ

ಉಡುಪಿ, ಜು. 7: ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಹಲವು ಬಾರಿ ಪುರಸಭೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರು ರಸ್ತೆ ಮಧ್ಯದ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಕಾರ್ಕಳ ಪುರಸಭೆ ವ್ಯಾಪ್ತಿಯ ಕಲ್ಲೊಟ್ಟೆ–ಬಂಡಿಮಠ ರಸ್ತೆಯಲ್ಲಿ ನಡೆದಿದೆ.

ಕಾರ್ಕಳ ಮಾರುಕಟ್ಟೆ ರಸ್ತೆಯಿಂದ ಪೆರ್ವಾಜೆ, ಕಲ್ಲೊಟ್ಟೆ ಮೂಲಕ ಬಂಡಿಮಠಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನಗಳಷ್ಟೇ ಅಲ್ಲದೆ ಪಾದಚಾರಿಗಳ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ. ಕಾರ್ಕಳದಿಂದ ಉಡುಪಿ ಹಾಗೂ ಹೆಬ್ರಿ ಕಡೆಗೆ ಸಂಚರಿಸುವ ಬಸ್‌ಗಳಿಗೆ ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದ್ದರೂ, ಆಳವಾದ ಗುಂಡಿಗಳಿಂದ ಭಾರೀ ವಾಹನಗಳು ಕಷ್ಟಪಟ್ಟು ಸಂಚರಿಸುತ್ತಿದ್ದು, ಲಘು ವಾಹನಗಳು, ತ್ರಿಚಕ್ರ ವಾಹನಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಬಹುತೇಕ ಅಸಾಧ್ಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸುಮಾರು ಒಂದು ವರ್ಷದಿಂದ ಅಮೃತ್ ಯೋಜನೆಯಡಿ ಈ ರಸ್ತೆಯಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಮುಖ್ಯ ಕೊಳವೆ ಅಳವಡಿಕೆಗಾಗಿ ರಸ್ತೆ ಅಗೆದು ಬಳಿಕ ಮಣ್ಣು ಮುಚ್ಚಲಾಗಿದೆ. ಆದರೆ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಳ್ಳದ ಕಾರಣ ರಸ್ತೆ ಹಲವು ಕಡೆ ಕುಸಿದು ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಅಳವಡಿಸಿರುವ ಪೈಪ್‌ಲೈನ್‌ಗಳು ಪದೇ ಪದೇ ಸೋರಿಕೆಯಾಗುತ್ತಿರುವುದರಿಂದ ನಿರಂತರವಾಗಿ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದ್ದು, ಸಾರ್ವಜನಿಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆ ಬದಿಯ ಚರಂಡಿಯ ಮೋರಿಯನ್ನೂ ಅಗೆದು ಬಿಟ್ಟಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆ ಮತ್ತಷ್ಟು ಹಾಳಾಗುತ್ತಿದೆ. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಮೃತ್ ಯೋಜನೆಯ ಕಾಮಗಾರಿ ಕಳಪೆಯಾಗಿದೆ ಎಂಬ ದೂರುಗಳು ಹಲವು ಬಾರಿ ಬಂದಿದ್ದರೂ ಪುರಸಭೆ ಹಾಗೂ ಸಂಬಂಧಿತ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ರಸ್ತೆ ಮಧ್ಯದ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!