ಮಂಗಳೂರು, ಜು.16: ಮುಲ್ಕಿ ಪೊಲೀಸ್ ಠಾಣೆಯೊಳಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಬೆದರಿಕೆ ಒಡ್ಡಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವ ಘಟನೆ ನಡೆದಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೋ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 12ರಂದು ತಾಳಿಪಾಡಿ ಗ್ರಾಮದ ದಾಮಸ್ಕಟ್ಟೆಯ ಗುಡ್ಡು ಪಂಡಿತ್ ಪ್ರದೇಶದಲ್ಲಿ ಸುಮಾ ಎಂಬವರ ಮನೆಗೆ ಕೆಲವರು ನುಗ್ಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಘಟನೆಯ ಬಳಿಕ 112ಕ್ಕೆ ಕರೆ ಮಾಡಿದರೂ ಸುಮಾರು 40 ನಿಮಿಷಗಳ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ದೂರು ದಾಖಲಿಸುವಂತೆ ಸೂಚಿಸಿದ್ದಾರೆ. ಗಾಯಾಳು ಸುಮಾ ಮುಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದ ಬಳಿಕ ರಾತ್ರಿ ಸುಮಾರು 10 ಗಂಟೆಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದರು. ಆದರೆ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದು, ಕೊನೆಗೆ ಮಧ್ಯರಾತ್ರಿ ಬಳಿಕ ಕ್ರೈಂ ನಂ.48/2026 ದಾಖಲಿಸಲಾಗಿದೆ ಎಂದು ಹೇಳಿದರು.

ಈ ಮಧ್ಯೆ ಕಿಶೋರ್ ಶೆಟ್ಟಿ ದಾಪಣೆಗುತ್ತು ಎಂಬವರು ಹಲ್ಲೆ ನಡೆಸಿದವರ ಪರವಾಗಿ ಠಾಣೆಗೆ ಬಂದು ಪೊಲೀಸರೊಂದಿಗೆ ದಬ್ಬಾಳಿಕೆ ನಡೆಸಿ, ತಮ್ಮ ಸೂಚನೆಯಂತೆ ನಡೆದುಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ರೊಜಾರಿಯೋ ಆರೋಪಿಸಿದರು. ಪೊಲೀಸರನ್ನು ಬೆದರಿಸಿ “ಯೂನಿಫಾರ್ಮ್ ಬಿಚ್ಚಿಸುವ ಸಾಮರ್ಥ್ಯ ನನಗಿದೆ” ಎಂದು ಹೇಳಿದರೆಂದು ಅವರು ದೂರಿದರು.

ಈ ಒತ್ತಡದ ಪರಿಣಾಮವಾಗಿ ಹಲ್ಲೆಗೊಳಗಾದವರ ಮೇಲೆಯೂ ಕ್ರೈಂ ನಂ.49/2026 ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ ಅವರು, ಈ ಘಟನೆಯ ಸಂಪೂರ್ಣ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಈ ರೀತಿಯ ಘಟನೆಗಳು ಪೊಲೀಸರ ಮನೋಬಲ ಕುಗ್ಗಿಸುವುದರ ಜೊತೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತವೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಈ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರಕರಣದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 152ನ್ನು ದಾಖಲಿಸಿರುವುದನ್ನೂ ಪ್ರಶ್ನಿಸಿದ ರೊಜಾರಿಯೋ, ಪ್ರಕರಣದ ಸ್ವರೂಪಕ್ಕೆ ಈ ಕಲಂ ಅನ್ವಯಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜನ್ ಡಿಕೋಸ್ಟ, ಸುಮಾ, ಅನಿಲ್ ಸಾಲಿಯಾನ್ ಹಾಗೂ ಕವಿತಾ ಉಪಸ್ಥಿತರಿದ್ದರು.


