ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ಎನ್‌ಎಂಸಿ ಅನುಮೋದನೆ; 150 ಎಂಬಿಬಿಎಸ್ ಸೀಟುಗಳಿಗೆ ಹಸಿರು ನಿಶಾನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ ವೈದ್ಯಕೀಯ ಶಿಕ್ಷಣ ಯೋಜನೆಗೆ ಮಹತ್ವದ ಯಶಸ್ಸು ದೊರೆತಿದ್ದು, 2026-27ನೇ ಶೈಕ್ಷಣಿಕ ಸಾಲಿನಿಂದ ಮಿಜಾರಿನ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅಧಿಕೃತ ಅನುಮೋದನೆ ನೀಡಿದೆ.

ಅತ್ಯಾಧುನಿಕ ಮೂಲಸೌಕರ್ಯ, ಸುಸಜ್ಜಿತ ಪ್ರಯೋಗಾಲಯಗಳು, ಬೋಧನಾ ಆಸ್ಪತ್ರೆ ಹಾಗೂ ಅನುಭವಿ ಬೋಧಕ ವೃಂದದೊಂದಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಯನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಕಾಲೇಜು ಕಾರ್ಯನಿರ್ವಹಿಸಲಿದೆ.

ಈ ಅನುಮೋದನೆಯೊಂದಿಗೆ ಮೊದಲ ಶೈಕ್ಷಣಿಕ ವರ್ಷದಲ್ಲೇ 150 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ವ್ಯಾಸಂಗದ ಅವಕಾಶ ದೊರೆಯಲಿದ್ದು, ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ವೈದ್ಯಕೀಯ ಶಿಕ್ಷಣಾಕಾಂಕ್ಷಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಸಂಶೋಧನೆ ಕ್ಷೇತ್ರಕ್ಕೂ ಸಂಸ್ಥೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.

ಈ ಕುರಿತು ಪ್ರತಿಕ್ರಿಯಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಅನುಮೋದನೆ ನೀಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ, ಕೇಂದ್ರ ಹಾಗೂ ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಪಯಣದಲ್ಲಿ ವೈದ್ಯಕೀಯ ಕಾಲೇಜು ಹೊಸ ಅಧ್ಯಾಯವಾಗಿದ್ದು, ಸಮರ್ಥ ವೈದ್ಯರನ್ನು ರೂಪಿಸುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಸಮಾಜಕ್ಕೆ ಒದಗಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!