ಉಳ್ಳಾಲ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ: ಸಚಿವರಿಗೆ ಎಸ್.ಎಲ್. ಬೋಜೇಗೌಡ ಆಗ್ರಹ

ಮಂಗಳೂರು, ಜು. 16: ಉಳ್ಳಾಲದಲ್ಲಿ ವರ್ಷಂಪ್ರತಿ ಮರುಕಳಿಸುತ್ತಿರುವ ಕಡಲ್ಕೊರೆತ ಸಮಸ್ಯೆಗೆ ತಾತ್ಕಾಲಿಕ ಕಾಮಗಾರಿಗಳ ಬದಲಾಗಿ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಆಗ್ರಹಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅವರ ಕುಟುಂಬಕ್ಕೆ ಈ ಭಾಗದ ಸಮಸ್ಯೆಗಳ ಕುರಿತು ಸಂಪೂರ್ಣ ಅರಿವಿದ್ದರೂ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಹೇಳಿದರು.

ಕಡಲ್ಕೊರೆತವು ಪ್ರಕೃತಿ ವಿಕೋಪವಾಗಿದ್ದರೂ, ಅದರಿಂದಾಗುವ ಹಾನಿಯನ್ನು ತಡೆಗಟ್ಟುವ ಜವಾಬ್ದಾರಿ ಸರ್ಕಾರದ ಮೇಲಿದೆ. ಪ್ರತಿವರ್ಷ ತಾತ್ಕಾಲಿಕವಾಗಿ ಕಲ್ಲುಗಳನ್ನು ಹಾಕುವ ಕಾಮಗಾರಿಗೆ ಸೀಮಿತವಾಗದೆ, ಶಾಶ್ವತ ತಡೆಗೋಡೆ ನಿರ್ಮಾಣ ಅಥವಾ ವೈಜ್ಞಾನಿಕ ಕರಾವಳಿ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮರವಂತೆ ಸೇರಿದಂತೆ ರಾಜ್ಯದ ಇತರ ಕರಾವಳಿ ಪ್ರದೇಶಗಳಲ್ಲಿ ಹಾಗೂ ಮುಂಬೈನಲ್ಲಿ ಕಡಲ್ಕೊರೆತ ನಿಯಂತ್ರಣಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಿರುವ ಮಾದರಿಗಳನ್ನು ಉಲ್ಲೇಖಿಸಿದ ಅವರು, ಅದೇ ರೀತಿಯ ಯೋಜನೆಯನ್ನು ಉಳ್ಳಾಲದಲ್ಲೂ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಡಲ್ಕೊರೆತದಿಂದ ಉಳ್ಳಾಲದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜೀವನ ದುಸ್ತರವಾಗಿದೆ. ಸುಮಾರು 70 ವರ್ಷಗಳಿಂದ ಅಲ್ಲೇ ವಾಸಿಸುತ್ತಿರುವ ಮಹಿಳೆಯೊಬ್ಬರು ಮನೆಗೆ ಗ್ಯಾಸ್ ಸಿಲಿಂಡರ್ ತರುವುದಕ್ಕೂ, ನಡೆದಾಡುವುದಕ್ಕೂ ದಾರಿಯಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ತಕ್ಷಣ ಪರಿಹಾರ ಹಾಗೂ ಅಗತ್ಯ ನೆರವು ನೀಡುವ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ ಅವರು, ಕರಾವಳಿ ಭಾಗದ ಜನರು ಪ್ರತಿದಿನ ಭಯದ ವಾತಾವರಣದಲ್ಲಿ ಬದುಕುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಗೆ ಸರ್ಕಾರ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಹೇಳಿದರು.

“ಪ್ರಕೃತಿಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಪ್ರಕೃತಿ ವಿಕೋಪದಿಂದಾಗುವ ಹಾನಿಯನ್ನು ವೈಜ್ಞಾನಿಕ ಕ್ರಮಗಳ ಮೂಲಕ ನಿಯಂತ್ರಿಸುವ ಸಾಮರ್ಥ್ಯ ಸರ್ಕಾರಕ್ಕಿದೆ. ಆದ್ದರಿಂದ ಉಳ್ಳಾಲ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು” ಎಂದು ಎಸ್.ಎಲ್. ಬೋಜೇಗೌಡ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಶಿರಾಜ್ ಶೆಟ್ಟಿ ಕೊಳಂಬೆ, ಅಕ್ಷಯ್ ಸುವರ್ಣ, ಜಾಕೆ ಮಾಧವ ಗೌಡ, ವಿಲ್ಸೆಂಟ್, ಯೋಗೀಶ್ ಶೆಟ್ಟಿ ಜೆಪ್ಪು ಸೇರಿದಂತೆ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!