ಮೂಡಬಿದ್ರೆ, ಜುಲೈ 20: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಖಾಸಗಿ ಬಸ್ ನಿಲ್ದಾಣದಲ್ಲಿ ಯುವಕನೋರ್ವ ಕೈಯಲ್ಲಿ ಮಚ್ಚು ಹಿಡಿದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಯುವಕನನ್ನು ರಾಜೇಶ್ ಎಂದು ಗುರುತಿಸಲಾಗಿದೆ.

ಹಾಡಹಗಲೇ ಕೈಯಲ್ಲಿ ಮಚ್ಚು ಹಿಡಿದು ಬಸ್ ನಿಲ್ದಾಣಕ್ಕೆ ಬಂದ ರಾಜೇಶ್, ಅಲ್ಲಿನ ಮೊಬೈಲ್ ಅಂಗಡಿಯೊಂದಕ್ಕೆ ತೆರಳಿ ಸಿಬ್ಬಂದಿಗೆ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ಹೊರಬಂದು ಮಚ್ಚನ್ನು ಬೆನ್ನಿನ ಭಾಗದಲ್ಲಿ ಇರಿಸಿಕೊಂಡು ಬಸ್ ನಿಲ್ದಾಣದಲ್ಲೇ ಕುಳಿತಿದ್ದಾನೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಸ್ಥಳೀಯ ಯುವಕರು ಸಮಯಪ್ರಜ್ಞೆ ಮೆರೆದು ಯುವಕನನ್ನು ಹೊರಹೋಗದಂತೆ ತಡೆದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಮೂಡಬಿದ್ರೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

