ಉಡುಪಿ: ಉಡುಪಿ ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ವಿಧಿಸಲಾಗಿರುವ ತಡೆಯನ್ನು ತಕ್ಷಣ ಹಿಂಪಡೆಯುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರಾವಳಿಯ ಸಂಪ್ರದಾಯ, ಸಂಸ್ಕೃತಿ ಹಾಗೂ ಜನರ ಭಾವನೆಗಳಿಗೆ ನಂಟಿರುವ ಕಂಬಳಕ್ಕೆ ತಡೆ ವಿಧಿಸಿರುವ ಕ್ರಮವನ್ನು ವಿರೋಧಿಸಿದ ಅವರು, ಸಾಂಪ್ರದಾಯಿಕ ಕ್ರೀಡೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.

ಕರಾವಳಿಯ ಕಂಬಳಗಳ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಕೋರ್ಟ್ ಆದೇಶವನ್ನು ಹಿಂಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕರಾವಳಿಯ ಕಂಬಳಕ್ಕೆ ನ್ಯಾಯ ದೊರಕುವಂತೆ ಸರ್ಕಾರ ಮುಂದಾಗಬೇಕು ಎಂದು ಗುರ್ಮೆ ಸುರೇಶ್ ಶೆಟ್ಟಿ ಒತ್ತಾಯಿಸಿದರು.

