ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ಎಲ್‌ಕೆಜಿ ವಿದ್ಯಾರ್ಥಿನಿ ಸಾವು

ಬಂಟ್ವಾಳ, ಜು. 23: ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಎಲ್‌ಕೆಜಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ನಾಲ್ವರು ಮಕ್ಕಳು ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಬುಧವಾರ ಸಂಜೆ ಬಂಟ್ವಾಳ ತಾಲೂಕಿನ ಬರಿಮಾರು ಸಮೀಪದ ಕಲ್ಲೆಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿನಿ ಚಿರನ್ವಿ (6) ಎಂದು ಗುರುತಿಸಲಾಗಿದೆ. ಈಕೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ತೋಟ ಹೌಸ್ ನಿವಾಸಿಗಳಾದ ಚಂದ್ರಶೇಖರ ಮತ್ತು ಅನಿತಾ ದಂಪತಿಯ ಪುತ್ರಿ.

ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸಂಜೆ ಶಾಲಾ ಮಕ್ಕಳನ್ನು ಮನೆಗಳಿಗೆ ಬಿಡಲು ಎಂದಿನಂತೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಂಗ್ಲ ಮಾಧ್ಯಮ ವಿಭಾಗದ 24 ಆಸನಗಳ ಮಿನಿ ಬಸ್ ಹೆದ್ದಾರಿ ಮಾರ್ಗವಾಗಿ ಮಾಣಿ, ಭರಣಿಕೆರೆ, ಕಲ್ಲೆಟ್ಟಿ ಮೂಲಕ ಪೆರ್ನೆ ಕಡೆಗೆ ತೆರಳುತ್ತಿತ್ತು. ಕೆಲ ವಿದ್ಯಾರ್ಥಿಗಳನ್ನು ಇಳಿಸಿದ ಬಳಿಕ ಬರಿಮಾರು ಗ್ರಾಮದ ಕಲ್ಲೆಟ್ಟಿಯ ಶ್ರೀ ಕಾನಲ್ತಾಯ ದೈವಸ್ಥಾನದ ಸಮೀಪ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಏಕಾಏಕಿ ಬಸ್ ಮೇಲೆ ಉರುಳಿ ಬಿದ್ದಿದೆ.

ಮರ ಬಿದ್ದ ರಭಸಕ್ಕೆ ಬಸ್‌ನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಪುಟಾಣಿ ಮಕ್ಕಳು ತೀವ್ರ ಆಘಾತಕ್ಕೊಳಗಾದರು. ಗಂಭೀರವಾಗಿ ಗಾಯಗೊಂಡಿದ್ದ ಚಿರನ್ವಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು.

ದುರ್ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ಬಸ್‌ನಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಣಾಮವೇ ಮರ ಬುಡಸಮೇತ ಉರುಳಿ ಬಿದ್ದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ದುರ್ಘಟನೆಯಿಂದ ಬಿಳಿಯೂರು, ಪೆರ್ನೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ಗುರುತಿಸಿ ತ್ವರಿತವಾಗಿ ತೆರವುಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!