ಉಡುಪಿ: ಪೆರಂಪಳ್ಳಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾದ ‘ಕೆಸರ್ ಡೊಂಜಿ ದಿನ’ ಕಾರ್ಯಕ್ರಮ ಪೆರಂಪಳ್ಳಿಯ ನೋಳೆ ಲಚ್ಚಿಲ್ ಶ್ರೀ ಪುತ್ತು ನಾಯ್ಕರ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು.


ಗ್ರಾಮದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳು ಹಾಗೂ ಯುವಕ-ಯುವತಿಯರು ಕೆಸರಿನಲ್ಲಿ ಆಟವಾಡಿ, ಪರಸ್ಪರ ಕೆಸರನ್ನು ಎರಚಿಕೊಂಡು ಸಂಭ್ರಮಿಸಿದರು. ಡಿಜೆ ಸಂಗೀತದ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು.


ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ, ಪೆರಂಪಳ್ಳಿ ಫಾತಿಮಾ ಮಾತಾ ಚರ್ಚ್‌ನ ಧರ್ಮಗುರು ವಿಶಾಲ್ ಲೋಬೋ, ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ವಿಜಯ ಕೊಡವೂರು ಹಾಗೂ ಅನಿತಾ ಬೆಲಿಂದ ಡಿಸೋಜಾ, ಸಮಿತಿಯ ಕ್ರೀಡಾ ಕಾರ್ಯದರ್ಶಿ ಪ್ರತೀಕ್ ಯಾದವ್, ಗಿರೀಶ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಕ್ಕಳಿಗಾಗಿ 50 ಮೀಟರ್ ಓಟ, ಹಾಳೆ ಓಟ, ಕಪ್ಪೆ ಓಟ, ಮಡಿಕೆ ಒಡೆಯುವುದು ಹಾಗೂ ಗಿರಿಗಿಟ್ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಯುವಕ-ಯುವತಿಯರಿಗೆ 100 ಮೀಟರ್ ಓಟ, ಹಿಮ್ಮುಖ ಓಟ, ಹಾಳೆ ಓಟ, ಮಡಿಕೆ ಒಡೆಯುವುದು, ಗಿರಿಗಿಟ್ ಓಟ, ಹಗ್ಗಜಗ್ಗಾಟ ಹಾಗೂ ವಿನೂತನ ‘ನೇಜಿ ನಡುವ’ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

