ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮರ್ ಫಾರೂಕ್ ಎನ್‌ಐಎ ಬಲೆಗೆ

2022ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಪ್ರಮುಖ ಆರೋಪಿ ಉಮರ್ ಫಾರೂಕ್ ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.


ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬುಧವಾರ(ಆ5)ಕೇರಳದ ಕೊಚ್ಚಿಯಲ್ಲಿ ಉಮರ್ ಫಾರೂಕ್ ನನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿದ್ದ ಉಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ (RCN) ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ಎನ್‌ಐಎ 4 ಲಕ್ಷ ರೂ. ಇನಾಮನ್ನೂ ಘೋಷಿಸಲಾಗಿತ್ತು.


ಪ್ರವೀಣ್ ನೆಟ್ಟಾರು ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (IPC) ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿಯಲ್ಲಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.
ಈ ವರ್ಷದ ಜುಲೈನಲ್ಲಿ ಎನ್‌ಐಎ ಮತ್ತಿಬ್ಬರು ತಲೆಮರೆಸಿಕೊಂಡಿದ್ದ ಆರೋಪಿಗಳಾದ ಅಬ್ದುಲ್ ನಾಸಿರ್ ಪಿ. ಅಲಿಯಾಸ್ ನಾಸಿರ್ ಹಾಗೂ ನೌಶಾದ್ ಅವರನ್ನು ಕ್ರಮವಾಗಿ ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಹೊಸೂರುಗಳಲ್ಲಿ ಬಂಧಿಸಿತ್ತು. ಆಂಧ್ರ ಪ್ರದೇಶ ಪೊಲೀಸರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಈ ಸಂಯೋಜಿತ ಕಾರ್ಯಾಚರಣೆ ನಡೆಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರಂದು ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ತನಿಖೆಯಲ್ಲಿ ಈ ಹತ್ಯೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ರೂಪಿಸಿದ್ದ ಸಂಚಿನ ಭಾಗವಾಗಿತ್ತು ಎಂಬುದು ಬಹಿರಂಗವಾಗಿದೆ.
ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎನ್ನಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!