ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸಿಪಿಐ(ಎಂ) ನಾಯಕ ಐಪಿ ಬಿನು ಸೇರಿದಂತೆ ಇನ್ನೂ ಐವರು ಆರೋಪಿಗಳಿಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಜಾಮೀನು ಪಡೆದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಇಡಿ ಅಧಿಕಾರಿಗಳು ಸಂಚರಿಸುತ್ತಿದ್ದ ವಾಹನದ ಮೇಲೆ ಐಪಿ ಬಿನು ಮೊಟ್ಟೆ ಎಸೆಯುತ್ತಿರುವ ದೃಶ್ಯಗಳು ಈ ಹಿಂದೆ ಬಹಿರಂಗವಾಗಿದ್ದವು. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಹತ್ತು ಮಂದಿಯಲ್ಲೊಬ್ಬರಾಗಿರುವ ಐಪಿ ಬಿನು, ಇಡಿ ಅಧಿಕಾರಿಗಳು ಪಿಣರಾಯಿ ವಿಜಯನ್ ಅವರ ತಿರುವನಂತಪುರಂನ ವಝುತಕ್ಕಾಡ್ ನಿವಾಸಕ್ಕೆ ಶೋಧ ಕಾರ್ಯಕ್ಕಾಗಿ ಆಗಮಿಸಿದಾಗ ಪ್ರತಿಭಟನೆಗೆ ಮುನ್ನಡೆ ನೀಡಿದ್ದರು. ಬಳಿಕ ಅಧಿಕಾರಿಗಳು ವಾಹನದಿಂದ ಇಳಿದಾಗ ದಾಳಿಗೆ ನೇತೃತ್ವ ವಹಿಸಿ ಕೊಳೆತ ಮೊಟ್ಟೆಗಳನ್ನು ಎಸೆದಿದ್ದರು ಎನ್ನಲಾಗಿದೆ.

ಈ ಮೊದಲು 67 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಒಂಬತ್ತು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆರೋಪಿಗಳಿಗೆ ಜಾಮೀನು ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ನಾಳೆ ನ್ಯಾಯಾಧೀಶರ ಮೇಲೆಯೂ ದಾಳಿ ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಭಿಯೋಜಕ ಪಕ್ಷ ವಾದಿಸಿತ್ತು. ತನಿಖೆಯನ್ನು ಹಾಳುಮಾಡುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ ಎಂಬುದು ಇಡಿಯ ವಾದವಾಗಿತ್ತು.
ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅವರು ಈಗಾಗಲೇ 67 ದಿನಗಳನ್ನು ಬಂಧನದಲ್ಲೇ ಕಳೆದಿದ್ದಾರೆ. ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿತು. ಜೊತೆಗೆ, ಆರೋಪಿಗಳ ವಿರುದ್ಧ ಪ್ರಥಮ ದೃಷ್ಟ್ಯಾ ಕೊಲೆ ಯತ್ನದ ಆರೋಪ (Attempt to Murder) ಅನ್ವಯಿಸುವುದಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಈ ಪ್ರಕರಣದಲ್ಲಿ ಒಟ್ಟು 25 ಮಂದಿ ಆರೋಪಿಗಳಿದ್ದಾರೆ. ಪ್ರತಿಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ ಪಿಣರಾಯಿ ವಿಜಯನ್ ಅವರ ನಿವಾಸದಲ್ಲಿ ಶೋಧ ಕಾರ್ಯಕ್ಕಾಗಿ ತೆರಳಿದ್ದ ಇಡಿ ಅಧಿಕಾರಿಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಈ ಪ್ರಕರಣ ದಾಖಲಾಗಿತ್ತು.

