ಅ.9ರಂದು ಕುಂತಳ ನಗರದಲ್ಲಿ 5ನೇ ಬೃಹತ್ ಉದ್ಯೋಗ ಮೇಳ- ಸ್ಟಡಿ ಅಬ್ರಾಡ್ ಎಕ್ಸ್‌ಪೋ

ಉದ್ಯೋಗ ಮೇಳದಲ್ಲಿ 2,500 ಅವಕಾಶಗಳ ನಿರೀಕ್ಷೆ

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ವತಿಯಿಂದ ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಹಾಗೂ ಎಂ.ಆರ್.ಜಿ. ಗ್ರೂಪ್ ಪ್ರಾಯೋಜಕತ್ವದಲ್ಲಿ 5ನೇ ಬೃಹತ್ ಉದ್ಯೋಗ ಮೇಳ ಮತ್ತು ಸ್ಟಡಿ ಅಬ್ರಾಡ್ ಎಕ್ಸ್‌ಪೋ-2026 ಅ.9ರಂದು ಕುಂತಳ ನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಶನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆವರಣದಲ್ಲಿ ನಡೆಯಲಿದೆ.


ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಯುವಜನರಿಗೆ ಉದ್ಯೋಗಾವಕಾಶಗಳನ್ನು ಪರಿಚಯಿಸುವುದು, ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಹಾಗೂ ವಿದ್ಯಾರ್ಹತೆ ಮತ್ತು ಕೌಶಲ್ಯಕ್ಕೆ ಅನುಗುಣವಾದ ಉದ್ಯೋಗ ಪಡೆಯಲು ನೆರವಾಗುವುದು ಮೇಳದ ಉದ್ದೇಶವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು‌. ಬೃಹತ್ ಉದ್ಯೋಗ ಮೇಳವನ್ನು ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸ್ಟಡಿ ಅಬ್ರಾಡ್ ಎಕ್ಸ್‌ಪೋ-2026 ಅನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಎನ್. ವಿಶಾಲ್ ಹೆಗ್ಡೆ ಉದ್ಘಾಟಿಸಲಿದ್ದು, ‘ಕೌಶಲ್ಯ ಸ್ಕಿಲ್ಸ್-2026’ ಬುಲೆಟಿನ್ ಅನ್ನು ಮಾಹೆಯ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಬಿಡುಗಡೆ ಮಾಡಲಿದ್ದಾರೆ.
ಸಂಜೆ 4.30ಕ್ಕೆ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ರಾಜಕೀಯ ಮತ್ತು ಸಾಮಾಜಿಕ ಮುಖಂಡರು, ಉದ್ಯಮಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದರು.


ಬೆಳಿಗ್ಗೆ 9ರಿಂದ ಅಭ್ಯರ್ಥಿಗಳ ನೋಂದಣಿ ಹಾಗೂ ಸಂದರ್ಶನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 5ರವರೆಗೆ ಮೇಳ ನಡೆಯಲಿದೆ. ಸುಮಾರು 50 ಕಂಪನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, 10ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳು ಭಾಗವಹಿಸಲಿವೆ. ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಸೇವೆ, ಆಡಳಿತ ಮತ್ತು ನಿರ್ವಹಣೆ, ಸೌಲಭ್ಯ ನಿರ್ವಹಣೆ, ಮಾರಾಟ ಮತ್ತು ಮಾರುಕಟ್ಟೆ, ಲೆಕ್ಕಪತ್ರ ಮತ್ತು ಹಣಕಾಸು, ನವೀಕರಿಸಬಹುದಾದ ಇಂಧನ, ವಾಹನೋದ್ಯಮ ಹಾಗೂ ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 2,500 ಉದ್ಯೋಗಾವಕಾಶಗಳು ಲಭ್ಯವಾಗುವ ನಿರೀಕ್ಷೆಯಿದೆ ಎಂದು ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಕಲ್ಯಾಣ, ತರಬೇತಿ ಮತ್ತು ಉದ್ಯೋಗ ನಿಯೋಜನೆ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಜಿ. ಹೇಳಿದರು.


ಎಂಜಿನಿಯರಿಂಗ್ ಮತ್ತು ತಾಂತ್ರಿಕ ಹುದ್ದೆಗಳ ಜತೆಗೆ ಫಿಟ್ಟರ್‌, ತಂತ್ರಜ್ಞರು ಹಾಗೂ ವಿವಿಧ ಕೌಶಲ್ಯಾಧಾರಿತ ಹುದ್ದೆಗಳಿಗೂ ಅವಕಾಶವಿರಲಿದೆ. 3,000ಕ್ಕೂ ಹೆಚ್ಚು ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಎಂಜಿನಿಯರಿಂಗ್‌ನ ಎಲ್ಲ ವಿಭಾಗಗಳ ಪದವೀಧರರು, ಡಿಪ್ಲೊಮಾ, ಐಟಿಐ, ಪಿಯುಸಿ, ಎಸ್‌ಎಸ್‌ಎಲ್‌ಸಿ, ಯಾವುದೇ ವಿಷಯದ ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಎಂಬಿಎ ಅಭ್ಯರ್ಥಿಗಳು ಭಾಗವಹಿಸಬಹುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆಯಲು ಅವಕಾಶವಿದೆ ಎಂದರು.
ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಹಾಗೂ ಬಯೋಡೇಟಾದ ಸುಮಾರು 10 ಪ್ರತಿಗಳನ್ನು ತರಬೇಕು. ಮೇಳದ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶವಿದ್ದು, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ತಂಡವು ನೋಂದಣಿ ಮತ್ತು ಸಂದರ್ಶನ ಪ್ರಕ್ರಿಯೆಯಲ್ಲಿ ಸಹಕರಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ವಿಜಿತ್ ಶೆಟ್ಟಿ, ಅಂಕಿತ್, ಜ್ಯೋತಿ ಶೆಟ್ಟಿ, ಸಂಪನ್ನ ಶೆಟ್ಟಿ, ದಯಾನಂದ ಶೆಟ್ಟಿ, ಸತೀಶ್ ಶೆಟ್ಟಿ ಹಾಗೂ ಪದ್ಮನಾಭ ಹೆಗ್ಡೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!