ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆಯಾಗಿ ಸಾದಿಯಾ ಸಯ್ಯಿದಾ ಆಯ್ಕೆ: 2026–2029ನೇ ಅವಧಿಗೆ ನೂತನ ರಾಷ್ಟ್ರೀಯ ಸಮಿತಿ ರಚನೆ

ಕೊಯಮತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ವತಿಯಿಂದ ರಾಷ್ಟ್ರೀಯ ಪ್ರತಿನಿಧಿಗಳ ಸಮ್ಮೇಳನವು 2026ರ ನವೆಂಬರ್ 23ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯಿತು. ಸಮ್ಮೇಳನದಲ್ಲಿ 2026–2029ನೇ ಅವಧಿಗೆ ನೂತನ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ಕೇಂದ್ರ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕರ್ನಾಟಕದ ಸಾದಿಯಾ ಸಯ್ಯಿದಾ ಅವರು ರಾಷ್ಟ್ರೀಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

WIM ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಉದ್ಘಾಟಿಸಿದರು. SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಫೈಝಿ, ರಿಯಾಝ್ ಫರಂಗಿಪೇಟೆ, ಯಾಸ್ಮಿನ್ ಫಾರೂಕಿ ಹಾಗೂ ತಮಿಳುನಾಡು ರಾಜ್ಯ ಉಸ್ತುವಾರಿ ಅಧ್ಯಕ್ಷ ಅಸ ಉಮರ್ ಫಾರೂಕ್ ಅವರು ಗಣ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. SDPI ತಮಿಳುನಾಡು ರಾಜ್ಯ ಕೋಶಾಧಿಕಾರಿ ಮುಸ್ತಫಾ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜ್ ಹುಸೈನ್ ಉಪಸ್ಥಿತರಿದ್ದರು.

WIM ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ ಅವರು ಹಿಂದಿನ ಅವಧಿಯ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಹಿಂದಿನ ಅವಧಿಯ ಸಾಧನೆಗಳು, ಕಾರ್ಯಚಟುವಟಿಕೆಗಳು ಮತ್ತು ಅನುಭವಗಳ ಕುರಿತು ಸಮಗ್ರ ಪರಾಮರ್ಶೆ ನಡೆಸಲಾಯಿತು. ಮುಂದಿನ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ದೇಶದ ವಿವಿಧ ರಾಜ್ಯಗಳ ರಾಷ್ಟ್ರೀಯ ಹಾಗೂ ರಾಜ್ಯ ಸಮಿತಿ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ನೂತನ ಸಮಿತಿಯಲ್ಲಿ ಕೇರಳದ ರೈಹಾನತ್ ಕೆ.ಕೆ. ಮತ್ತು ಗುಜರಾತ್‌ನ ಕುಂಕುಮ್ ಬೆನ್ ರಾಷ್ಟ್ರೀಯ ಉಪಾಧ್ಯಕ್ಷೆಯರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ನಸ್ರಿಯಾ ಬೆಳ್ಳಾರೆ ಹಾಗೂ ಪಶ್ಚಿಮ ಬಂಗಾಳದ ರುನಾ ಲೈಲಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕರ್ನಾಟಕದ ನಸೀಮಾ ಝುರೈಜ್, ಬಿಹಾರದ ರಾಖಿ ಕುಮಾರಿ, ತಮಿಳುನಾಡಿನ ಫಾತಿಮಾ ಘನಿ ಮತ್ತು ಕೇರಳದ ಸುಲೈಖಾ ರಶೀದ್ ಆಯ್ಕೆಯಾಗಿದ್ದಾರೆ. ರಾಜಸ್ಥಾನದ ಫರೀದಾ ಸಯ್ಯಿದ್ ರಾಷ್ಟ್ರೀಯ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಯಾಸ್ಮಿನ್ ಇಸ್ಲಾಂ (ಪಶ್ಚಿಮ ಬಂಗಾಳ), ಶಾಹಿದಾ ತಸ್ನೀಂ (ಕರ್ನಾಟಕ), ಆತಿಕಾ ಸಜೀದ್ (ದೆಹಲಿ), ಆಲಿಯಾ ಪರ್ವೀನ್ (ಪಶ್ಚಿಮ ಬಂಗಾಳ), ಇರ್ಷಾನ ಎಂ.ಐ. (ಕೇರಳ), ಶಗುಫ್ತಾ (ಮಹಾರಾಷ್ಟ್ರ), ಅಡ್ವ. ನಯೀಮುನ್ನೀಸ (ಆಂಧ್ರಪ್ರದೇಶ), ವಾಜಿದಾ ಖಾತೂನ್ (ಜಾರ್ಖಂಡ್) ಹಾಗೂ ಮೆಹರಾಜ್ (ತಮಿಳುನಾಡು) ಅವರು ನೂತನ ಕೇಂದ್ರ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಸಮ್ಮೇಳನದಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಉಪಮೀಸಲಾತಿಯೊಂದಿಗೆ ಮೀಸಲಾತಿಯನ್ನು ಸಕಾಲದಲ್ಲಿ ಜಾರಿಗೊಳಿಸುವುದು ಹಾಗೂ ಕ್ಷೇತ್ರಗಳ ನ್ಯಾಯಸಮ್ಮತ ಪುನರ್‌ವಿಂಗಡಣೆಯನ್ನು ಖಚಿತಪಡಿಸುವಂತೆ ಒತ್ತಾಯಿಸಲಾಯಿತು. ಹಸಿವುಮುಕ್ತ ಭಾರತ ನಿರ್ಮಾಣ, ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಹಾಗೂ ಏರುತ್ತಿರುವ ಬೆಲೆಗಳು, ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಅಲ್ಲದೆ, ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವುದು, ಚುನಾವಣಾ ಆಯೋಗದ ಲೋಪದೋಷಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದು, ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ನ್ಯಾಯ ಖಚಿತಪಡಿಸುವುದು ಹಾಗೂ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡುವಂತೆ ಒತ್ತಾಯಿಸುವ ನಿರ್ಣಯಗಳನ್ನೂ ಅಂಗೀಕರಿಸಲಾಯಿತು.ರಾಷ್ಟ್ರೀಯ ಸಮಿತಿ ಸದಸ್ಯೆ ಸಮೀನಾ ಕೌಸರ್ ಕಾರ್ಯಕ್ರಮ ನಿರೂಪಿಸಿದರು. ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!