ಮಂಗಳೂರು:ರಾಜ್ಯದ ವಿವಿಧ ಭಾಗಗಳಲ್ಲಿ ಬರಗಾಲದ ತೀವ್ರತೆ ಹೆಚ್ಚಿದ್ದು, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವುದು ಸೂಕ್ತವಲ್ಲ. ಆದ್ದರಿಂದ ಆಯೋಜಕರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಕಂಬಳವನ್ನು ರದ್ದುಗೊಳಿಸಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ ಮನವಿ ಮಾಡಿದರು.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ 2,991 ಕೆರೆಗಳ ಪೈಕಿ 2,928 ಕೆರೆಗಳಲ್ಲಿ ನೀರಿಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಅಪಾರ ಪ್ರಮಾಣದ ನೀರು ಬಳಕೆ ಮಾಡುವುದು ಸಮಂಜಸವಲ್ಲ. ಕಂಬಳದ ಕೋಣಗಳ ಮಾಲಕರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು, ಈಗಾಗಲೇ ಮಾಡಿಸಿರುವ ನೋಂದಣಿಯನ್ನು ರದ್ದುಗೊಳಿಸಿ ಆಯೋಜನೆಯಿಂದ ಹಿಂದೆ ಸರಿಯಬೇಕು ಎಂದು ಕೋರಿದರು.

ಕಂಬಳ ಆಯೋಜನೆಗೆ ಗುರುತಿಸಿರುವ ಸ್ಥಳದಲ್ಲಿ ಕೆರೆ ಅಂಗಳ, ನೂರಾರು ಮರಗಳು ಹಾಗೂ ವಿವಿಧ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡುವ ನೈಸರ್ಗಿಕ ಪರಿಸರ ವ್ಯವಸ್ಥೆಯಿದೆ. ಕಂಬಳದ ಕಣ ಸಿದ್ಧಪಡಿಸುವ ನೆಪದಲ್ಲಿ 50ಕ್ಕೂ ಹೆಚ್ಚು ಮರಗಳು ಸೇರಿದಂತೆ ಅನೇಕ ಸಣ್ಣ ಗಿಡಮರಗಳನ್ನು ತೆರವುಗೊಳಿಸಿರುವುದು ಪರಿಸರ ಮತ್ತು ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡಿದೆ ಎಂದು ಆರೋಪಿಸಿದರು. ಸಹಜ ಕೃಷಿಭೂಮಿಯಲ್ಲಿ ನಡೆಯುವ ಕರಾವಳಿಯ ಕಂಬಳಕ್ಕೂ, ನಗರ ಪ್ರದೇಶದಲ್ಲಿ ಕೆರೆ ಮತ್ತು ಮರಗಳಿದ್ದ ಜಾಗದಲ್ಲಿ ಕೃತಕ ವ್ಯವಸ್ಥೆ ನಿರ್ಮಿಸಿ ಆಯೋಜಿಸುವ ಕಂಬಳಕ್ಕೂ ವ್ಯತ್ಯಾಸವಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ರೈತ ಸಂಘ, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಪರಿಸರ ತಜ್ಞರು, ಸಾಹಿತಿಗಳು ಹಾಗೂ ಮೈಸೂರಿನ ನಾಗರಿಕರನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿಯನ್ನು ಮೂರು-ನಾಲ್ಕು ತಿಂಗಳ ಹಿಂದೆಯೇ ರಚಿಸಲಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸದಂತೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪತ್ರ ಬರೆಯಲಾಗಿದೆ. ಹಲವು ಪ್ರತಿಭಟನೆಗಳನ್ನು ನಡೆಸಿದರೂ ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದರು.

ಕಂಬಳದ ಬಗ್ಗೆ ಕರಾವಳಿಯ ಜನರಿಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ಆದರೆ, ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ, ಆಯ್ಕೆ ಮಾಡಿರುವ ನಿರ್ದಿಷ್ಟ ಸ್ಥಳದಲ್ಲಿ ಕಂಬಳ ಆಯೋಜಿಸುವುದಕ್ಕೆ ಮಾತ್ರ ವಿರೋಧವಿದೆ. ಕರಾವಳಿಯ ಕಂಬಳವನ್ನು ನೋಡಬೇಕೆಂಬ ಆಸೆಯಿದ್ದರೆ ಆಯೋಜಕರು ತಮ್ಮ ಪ್ರದೇಶದಲ್ಲೇ ಕಂಬಳ ನಡೆಸಿ, ಮೈಸೂರಿನ ಜನರನ್ನು ಆಹ್ವಾನಿಸಬಹುದು. ದಸರಾ ಸಂದರ್ಭದಲ್ಲಿ ಈಗಾಗಲೇ ನಗರದಲ್ಲಿ ಜನದಟ್ಟಣೆ ಮತ್ತು ವ್ಯವಸ್ಥಾಪನಾ ಒತ್ತಡವಿದ್ದು, ಕಂಬಳದಿಂದ ಮತ್ತಷ್ಟು ಒತ್ತಡ ಸೃಷ್ಟಿಸಬಾರದು ಎಂದು ಹೇಳಿದರು.
ಸಾಹಿತಿ ಹಾಗೂ ಪತ್ರಕರ್ತೆ ಕುಸುಮ ಆಯರಹಳ್ಳಿ ಮಾತನಾಡಿ, ಕಂಬಳ ಆಯೋಜಕರಾದ ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಿಪ್ರಸಾದ್ ಶೆಟ್ಟಿ ಅವರಿಗೆ ಆರಂಭದಿಂದಲೇ ಮನವಿ ಮಾಡಲಾಗಿದೆ. ನೂರಾರು ಕಿಲೋಮೀಟರ್ ದೂರದಿಂದ ಕೋಣಗಳನ್ನು ಸಾಗಿಸುವುದು, ಅವುಗಳ ಆರೈಕೆ ಮತ್ತು ಸುರಕ್ಷತೆಯ ಜವಾಬ್ದಾರಿ ನಿರ್ವಹಿಸುವುದು ಸೇರಿದಂತೆ ಹಲವು ಸವಾಲುಗಳಿವೆ. ಕೋಣಗಳಿಗೆ ಯಾವುದೇ ತೊಂದರೆಯಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇದೆ. ಆದ್ದರಿಂದ ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸದೆ, ಆಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಹಣದಲ್ಲಿ ನಡೆಯುವ ಕಾರ್ಯಕ್ರಮವಾಗಿರುವುದರಿಂದ ಎಲ್ಲ ಜಿಲ್ಲೆಗಳಿಗೂ ಸಮಾನ ಆದ್ಯತೆ ನೀಡಬೇಕಾಗುತ್ತದೆ. ಕಂಬಳಕ್ಕೆ ದೊಡ್ಡ ಪ್ರಮಾಣದ ಜಾಗ ಮತ್ತು ಹಣ ಮೀಸಲಿಟ್ಟರೆ, ಇತರ ಜಿಲ್ಲೆಗಳೂ ತಮ್ಮ ಕಾರ್ಯಕ್ರಮಗಳಿಗೆ ಇದೇ ರೀತಿಯ ಅನುದಾನ ಮತ್ತು ಸೌಲಭ್ಯಗಳನ್ನು ಕೇಳುವ ಸಾಧ್ಯತೆಯಿದೆ. ಸಾರ್ವಜನಿಕ ಹಣವನ್ನು ವೆಚ್ಚ ಮಾಡುವಾಗ ಆದ್ಯತೆಗಳನ್ನು ಸೂಕ್ತವಾಗಿ ನಿರ್ಧರಿಸಬೇಕು ಎಂದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕಂಬಳಕ್ಕಾಗಿ ಅಪಾರ ಪ್ರಮಾಣದ ನೀರು ಬಳಸುವುದು ಎಷ್ಟು ಸಮಂಜಸ ಎಂಬುದನ್ನು ಸರ್ಕಾರ ಮತ್ತು ಆಯೋಜಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನೀರಿನ ಮಿತವ್ಯಯದ ಅಗತ್ಯವನ್ನು ಮುಖ್ಯಮಂತ್ರಿಗಳೇ ಒತ್ತಿಹೇಳಿರುವಾಗ, ಬರದ ಪರಿಸ್ಥಿತಿಯನ್ನು ನಿರ್ಲಕ್ಷಿಸಿ ಇಂತಹ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕಂಬಳ ಆಯೋಜನೆ ವಿರೋಧಿಸಿ ಕಳೆದ ಮೂರು ತಿಂಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಸಾಹಿತಿಗಳು, ಕಲಾವಿದರು, ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇದು ಕಂಬಳ ಕ್ರೀಡೆಯ ವಿರುದ್ಧದ ಹೋರಾಟವಲ್ಲ; ಬರಗಾಲದ ಪರಿಸ್ಥಿತಿ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಸದ್ಬಳಕೆಯ ದೃಷ್ಟಿಯಿಂದ ಮಾಡುತ್ತಿರುವ ಮನವಿ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಬಡಗಲಪುರ ನಾಗೇಂದ್ರ, ಲೀಲಾ ಶಿವಕುಮಾರ್ ಹಾಗೂ ಗುರುಪ್ರಸಾದ್ ಕೆರಗೋಡು ಉಪಸ್ಥಿತರಿದ್ದರು.

