ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆಶಿ ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಈ ವಿಚಾರದಲ್ಲಿ ಬಂಧನವಾಗಿರುವ ಬಗ್ಗೆ ಕೇಳಿದಾಗ, “ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಉಡುಪಿ ಮತ್ತು ಮಂಗಳೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿದ ಸಿಎಂ ಡಿಕೆಶಿ,
ಎಸ್ಐಆರ್ ವಿಚಾರವಾಗಿ ಮಾತನಾಡಿ, ಎಸ್ಐಆರ್ ದತ್ತಾಂಶಗಳ ವಿಚಾರವಾಗಿ ಇಂದು ನಾವು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಮತದಾನದ ಹಕ್ಕು ಬದುಕಿನ ಹಕ್ಕು. ಅದಕ್ಕಾಗಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಮುಂದುವರಿಸುತ್ತೇವೆ. ಪ್ರತಿಭಟನೆ ಮೆರವಣಿಗೆ ವೇಳೆ ರಾಹುಲ್ ಗಾಂಧಿ ಅವರು ನನಗೆ ವಾಹನದಲ್ಲಿ ಬರಲು ಹೇಳಿದ್ದನ್ನು ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ಇದು ದೊಡ್ಡ ಅಪಮಾನ ಎಂದು ಅಪಪ್ರಚಾರ ಮಾಡಿದರು. ನನ್ನನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದೇ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು. ಅವರ ಸಹಕಾರದಿಂದ ನಾವು ರಾಜ್ಯದಲ್ಲಿ ಮತದಾರರ ಹಕ್ಕು ಸಂರಕ್ಷಿಸುತ್ತಿದ್ದೇವೆ. ಬಿಜೆಪಿ ನಾಯಕರು ಇದರಲ್ಲಿ ಅಪಪ್ರಚಾರ ಮಾಡಿ ರಾಜಕೀಯ ಲಾಭಕ್ಕೆ ಮುಂದಾಗಿದ್ದಾರೆ. ಇಂತಹ ಸಣ್ಣ ವಿಚಾರವನ್ನು ಲಾಭಕ್ಕೆ ಬಳಸಿಕೊಳ್ಳುವುದು ಬೇಡ. ರಾಹುಲ್ ಗಾಂಧಿ ಅವರು ಮಾನವೀಯತೆ ಹೊಂದಿರುವ ನಾಯಕ” ಎಂದರು.

ಇನ್ನು ಕರಾವಳಿಯ ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ” ಎಂದ ಸಿಎಂ ಡಿ ಕೆ ಶಿವಕುಮಾರ್, ದಸರಾ ಸಂದರ್ಭದಲ್ಲಿ ಕುದ್ರೋಳಿಗೆ ಆಗಮಿಸುವಂತೆ ಬಹಳ ವರ್ಷಗಳಿಂದ ಜನಾರ್ದನ ಪೂಜಾರಿ ಅವರು ಆಹ್ವಾನ ನೀಡುತ್ತಲೇ ಇದ್ದರು. ಕಳೆದ ವರ್ಷ ಹಬ್ಬದ ಮಧ್ಯೆ ಬಂದಿದ್ದೆ. ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಮಾಜಗಳು, ಸಮುದಾಯಗಳನ್ನು ಒಗ್ಗೂಡಿಸುವ ಕೆಲಸವಾಗುತ್ತಿದೆ. ನವರಾತ್ರಿಯಲ್ಲಿ ನವದುರ್ಗೆಯರಿಗೆ ಪ್ರಾರ್ಥಿಸಿ, ಸಾಂಸ್ಕೃತಿಕ ಬದುಕನ್ನು ಬಿಂಬಿಸಲಾಗುತ್ತಿದೆ” ಎಂದು ತಿಳಿಸಿದರು.

