ಉಡುಪಿ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘ ಕಲಾಸಂಗಮದ ವತಿಯಿಂದ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟಿ’ಯ ನಾಲ್ಕನೇ ಆವೃತ್ತಿಯನ್ನು ಅ. 24ರಂದು ನಿಟ್ಟೆ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ತಿಳಿಸಿದರು.
ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಈ ಬಾರಿಯ ವೇದಿಕೆಗೆ ಕೀರ್ತಿಶೇಷ ಸೂರಿಕುಮೇರು ಕೆ. ಗೋವಿಂದ ಭಟ್ ಅವರ ಹೆಸರಿಡಲಾಗಿದ್ದು, ಸ್ಪರ್ಧೆಯನ್ನು ದಿವಂಗತ ಎನ್. ವಿನಯ ಹೆಗ್ಡೆ ಅವರ ಸ್ಮರಣಾರ್ಥ ಸಮರ್ಪಿಸಲಾಗುತ್ತಿದೆ. ಶಿಕ್ಷಣ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಅವರ ಚಿಂತನೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಐವರು ರಾಜರ ಕಥಾನಕ ರಂಗದಲ್ಲಿ ಸ್ಪರ್ಧೆಯಲ್ಲಿ ಐದು ಆಹ್ವಾನಿತ ತಂಡಗಳು ಭಾಗವಹಿಸಲಿದ್ದು, ‘ಇನವಂಶಚರಿತಾಮೃತ’ ಶೀರ್ಷಿಕೆಯಡಿ ಸೂರ್ಯವಂಶದ ರಾಜರಾದ ನಿಬಂಧನ, ದಂಡಕ, ದಿಲೀಪ, ಭಗೀರಥ ಹಾಗೂ ದಶರಥರ ಕಥಾನಕವನ್ನು ಯಕ್ಷಗಾನದ ಮೂಲಕ ಪ್ರಸ್ತುತಪಡಿಸಲಿವೆ.

ಹನುಮಗಿರಿ ಮೇಳದ ಖ್ಯಾತ ಯಕ್ಷಗಾನ ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಸದಸ್ಯ ಪ್ರಕಾಶ ಮೂಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಆತಿಥೇಯ ಕಾಲೇಜಿನ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಸಂಪ್ರದಾಯದೊಂದಿಗೆ ತಂತ್ರಜ್ಞಾನದ ಹೆಜ್ಜೆ
ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದ್ದರೂ ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡುತ್ತಿರುವ ನಿಟ್ಟೆ ಕಾಲೇಜು, ಸ್ಪರ್ಧೆಯ ಆಯೋಜನೆಯಲ್ಲಿ ತಂತ್ರಜ್ಞಾನಕ್ಕೂ ಆದ್ಯತೆ ನೀಡಿದೆ. ವೆಬ್ಸೈಟ್ ಮೂಲಕ ನೋಂದಣಿ, ಕಾಗದರಹಿತ ಮೌಲ್ಯಮಾಪನ ವ್ಯವಸ್ಥೆ ಹಾಗೂ 85 ಡೆಸಿಬೆಲ್ ಶಬ್ದಮಿತಿಯಂತಹ ಕ್ರಮಗಳನ್ನು ಅಳವಡಿಸಲಾಗಿದೆ.
2023ರಿಂದ ವಿವಿಧ ಯಕ್ಷಗಾನ ಸ್ಪರ್ಧೆಗಳಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿರುವ ವಿದ್ಯಾರ್ಥಿಗಳ ತಂಡ ಹಲವು ಬಾರಿ ಜಯಗಳಿಸಿದೆ. ಇದೀಗ ಸ್ಪರ್ಧೆಯ ಆಯೋಜನೆಯಲ್ಲಿಯೂ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಯಕ್ಷಗಾನ ತಂಡದ ಕಲಾವಿದರಷ್ಟೇ ಅಲ್ಲದೆ, ತಾಂತ್ರಿಕ ಜ್ಞಾನ ಹೊಂದಿರುವ ಇತರ ವಿದ್ಯಾರ್ಥಿಗಳೂ ನೋಂದಣಿ ವ್ಯವಸ್ಥೆ ಹಾಗೂ ಕಾಗದರಹಿತ ಮೌಲ್ಯಮಾಪನ ತಂತ್ರಜ್ಞಾನ ರೂಪಿಸುವಲ್ಲಿ ಕೈಜೋಡಿಸಿದ್ದಾರೆ.
ಸಾಮಾನ್ಯವಾಗಿ ಪಾತ್ರದ ಸ್ವರೂಪದ ಆಧಾರದಲ್ಲಿ ವೈಯಕ್ತಿಕ ಬಹುಮಾನ ನೀಡುವ ಬದಲು, ಪಾತ್ರಚಿತ್ರಣದ ಆಧಾರದಲ್ಲಿ ಬಹುಮಾನ ವಿತರಿಸುವ ಮೂಲಕ ಸ್ಪರ್ಧೆಯಲ್ಲಿ ಹೊಸತನಕ್ಕೆ ಒತ್ತು ನೀಡಲಾಗುತ್ತಿದೆ. ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡುತ್ತಿದ್ದು, ಉದ್ಯೋಗ ಕ್ಷೇತ್ರದಲ್ಲಿಯೂ ಯಶಸ್ಸು ಗಳಿಸಿದ್ದಾರೆ. ಶಿಕ್ಷಣದ ಜತೆಗೆ ಹವ್ಯಾಸಿ ಕಲಾವಿದರಾಗಿ ಕಲಾಸೇವೆಯನ್ನು ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ನರಸಿಂಹ ಕೆ. ಬೈಲ್ಕೇರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ ಜೋಯಿಸ್ ಎ., ಯಕ್ಷಗವಿಷ್ಟಿ 2026–27ರ ವಿದ್ಯಾರ್ಥಿ ಮುಖ್ಯಸ್ಥ ವರುಣ್ ಆಚಾರ್ಯ ಹಾಗೂ ಮುಖ್ಯಸ್ಥೆ ಪ್ರಣತಿ ಕಲ್ಲುರಾಯ ಉಪಸ್ಥಿತರಿದ್ದರು.


The app is incredibly lightweight and doesn’t lag even on my old phone. Perfect for gaming on the go. Check out bdxbajeeapp if you want a seamless mobile experience.