ಪರ್ಕಳ: ಶಿಕ್ಷಕರು ತಂತ್ರಜ್ಞಾನದ ಮೂಲಕ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ವೃದ್ಧಿಸಿಕೊಂಡಾಗ ವಿದ್ಯಾರ್ಥಿಗಳನ್ನೂ ಸಬಲರನ್ನಾಗಿ ಮಾಡಲು ಸಾಧ್ಯ. ಕೃತಕ ಬುದ್ಧಿಮತ್ತೆ (ಎಐ) ಮುಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿದೆ ಎಂದು ಮಣಿಪಾಲದ ಮಾಹೆ ಅಧೀನದ ಎಂಐಟಿಯ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಎಸ್. ಮಡ್ಡೋಡಿ ಹೇಳಿದರು.

ಪರ್ಕಳ ಎಜುಕೇಶನ್ ಸೊಸೈಟಿ (ರಿ.) ಮತ್ತು ರೋಟರಿ ಪರ್ಕಳ, ಝೋನ್-IV, ಆರ್ಐ ಜಿಲ್ಲೆ 3182 ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 22ರಂದು ಪರ್ಕಳ ಪ್ರೌಢಶಾಲೆಯ ಸುವರ್ಣ ಸೌಧ ಸಭಾಂಗಣದಲ್ಲಿ ಆಯೋಜಿಸಲಾದ ಮೂರು ದಿನಗಳ ಶಿಕ್ಷಕರ ತರಬೇತಿ ಕಾರ್ಯಕ್ರಮ ‘ಜ್ಞಾನ ವೃದ್ಧಿ’ಯಲ್ಲಿ ಅವರು ‘ಶಿಕ್ಷಕರಿಗಾಗಿ ಎಐ’ (AI for Teachers) ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು.
ಪಾಠ ಯೋಜನೆ ರೂಪಿಸುವುದು, ವಿದ್ಯಾರ್ಥಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡುವುದು ಹಾಗೂ ಕನ್ನಡ ಭಾಷೆಯಲ್ಲಿ ವಿಷಯಗಳನ್ನು ರಚಿಸುವುದು ಸೇರಿದಂತೆ ಬೋಧನಾ ಪ್ರಕ್ರಿಯೆಯಲ್ಲಿ ಉಪಯುಕ್ತವಾಗುವ ವಿವಿಧ ಎಐ ಪರಿಕರಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಶಿಕ್ಷಕರು ತಮ್ಮ ಬೋಧನಾ ಕೌಶಲವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಕಳ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರೋ. ಬಿ. ಅರುಣಾಚಲ ಹೆಗಡೆ ವಹಿಸಿದ್ದರು. ರೋಟರಿ ಝೋನ್-IV, ಆರ್ಐ ಜಿಲ್ಲೆ 3182ರ ಸಹಾಯಕ ಗವರ್ನರ್ ರೋ. ಹೇಮಂತ್ ಯು. ಕಾಂತ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೋಟರಿ ಪರ್ಕಳದ ಅಧ್ಯಕ್ಷ ರೋ. ರಾಮಮೂರ್ತಿ ಪಿ., ಪರ್ಕಳ ಪ್ರೌಢಶಾಲೆಯ ಸಂಚಾಲಕ ಹಾಗೂ ಮಾಜಿ ಸಹಾಯಕ ಗವರ್ನರ್ ರೋ. ದಿನೇಶ್ ಹೆಗಡೆ ಅತ್ರಾಡಿ, ರೋಟರಿ ಝೋನಲ್ ಲೆಫ್ಟಿನೆಂಟ್ ರೋ. ನಿತ್ಯಾನಂದ ನಾಯಕ್, ಪರ್ಕಳ ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ವಾಸು ಪ್ರಭು ಹಾಗೂ ರೋಟರಿ ಪರ್ಕಳದ ಕಾರ್ಯದರ್ಶಿ ರೋ. ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಉತ್ತಮ ಶಿಕ್ಷಕರು ಉಜ್ವಲ ಭವಿಷ್ಯದ ನಿರ್ಮಾತೃಗಳಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಕಲಿಕೆ ಅತ್ಯಗತ್ಯ ಎಂದು ಗಣ್ಯರು ಅಭಿಪ್ರಾಯಪಟ್ಟರು. ತಂತ್ರಜ್ಞಾನ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಸಮನ್ವಯದೊಂದಿಗೆ ಶಿಕ್ಷಕರನ್ನು ಸಬಲೀಕರಣಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ರೋಟರಿ ಸಂಸ್ಥೆಯ ನಡುವಿನ ಸಹಯೋಗ ಮಹತ್ವದ್ದಾಗಿದೆ ಎಂದು ಅವರು ಶ್ಲಾಘಿಸಿದರು.

ಕಾರ್ಯಕ್ರಮದ ಸಂಯೋಜಕ ರೋ. ರವೀಂದ್ರ ಆಚಾರ್ಯ, ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯ ಮನೋಹರ್ ನಾಯಕ್ ಹಾಗೂ ಇಂಗ್ಲಿಷ್ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಸುಜಾತಾ ಯು. ಎನ್. ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಾಲೆಯ ಶಿಕ್ಷಕರು, ಪರ್ಕಳ ಎಜುಕೇಶನ್ ಸೊಸೈಟಿ ಮತ್ತು ರೋಟರಿ ಪರ್ಕಳದ ಸದಸ್ಯರು, ಮಣಿಪಾಲದ ಎಂಐಟಿಯ ಎನ್ಎಸ್ಎಸ್ ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

