ಹೈದರಾಬಾದ್, ಅಕ್ಟೋಬರ್ ೨೩, ೨೦೨೬: ಭಾರತದ ಪಶ್ಚಿಮ ಕರಾವಳಿಯ ಕೊಂಕಣ ಪ್ರದೇಶವು ಸಂಸ್ಕೃತಿ, ಜಾನಪದ ಮತ್ತು ಜನಾಂಗೀಯ-ಭಾಷಿಕ ವೈವಿಧ್ಯತೆಯ ಕೇಂದ್ರವಾಗಿದೆ. ಇದು ಉತ್ತರದಲ್ಲಿ ದಮನ್ನಿಂದ ಹಿಡಿದು ದಕ್ಷಿಣದಲ್ಲಿ ಗಂಗಾವಳಿ ನದಿ ಮತ್ತು ಕಾರವಾರದವರೆಗೆ ವಿಸ್ತರಿಸಿದೆ. ದಕ್ಷಿಣದ ಕೊಚ್ಚಿ ವರೆಗೆ ಕೊಂಕಣಿ ಭಾಷಿಗರಿದ್ದಾರೆ. ಈ ಕಿರಿದಾದ ಭೂಭಾಗದ ಉದ್ದಕ್ಕೂ ಕೊಂಕಣಿ ಭಾಷೆಯನ್ನು ಮಾತನಾಡಲಾಗುತ್ತದೆ, ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದಲ್ಲಿ ಗಮನಾರ್ಹವಾದ ಸ್ಥಳೀಯ ವ್ಯತ್ಯಾಸಗಳಿವೆ. ಈ ಪ್ರದೇಶದಲ್ಲಿ ವಿವಿಧ ಸಾಮಾಜಿಕ, ವಲಸೆ ಮತ್ತು ಧಾರ್ಮಿಕ ಸಮೂಹಗಳು ವಾಸಿಸುತ್ತಿವೆ. ಆದಾಗ್ಯೂ, ಈ ಪ್ರದೇಶದ ಜನರ ಜೀನ್ಗಳ ಸಂರಚನೆ ಸಾಕಷ್ಟು ಅಧ್ಯಯನಕ್ಕೊಳಗಾಗಿಲ್ಲ.

ಹೈದರಾಬಾದ್ನ CCMB (ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿ) ಯ ಡಾ. ಕೆ. ತಂಗರಾಜ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಎಂ. ಎಸ್. ಮುಶ್ತಾಕ್ ಅವರ ನೇತೃತ್ವದ ಇತ್ತೀಚಿನ ಅಧ್ಯಯನವು ಕೊಂಕಣಿ ಮಾತನಾಡುವ ಜನರ ಸಂಕೀರ್ಣ ಮಾತೃಜೀವಕೋಶ ಆನುವಂಶಿಕತೆಯನ್ನು ಬೆಳಗಿಗೆ ತಂದಿದೆ. ಈ ಅಧ್ಯಯನವು ‘Heredity’ ಜರ್ನಲ್ನಲ್ಲಿ ಪ್ರಕಟವಾಗಿದೆ.
ಕೊಂಕಣಿ ಜನಸಮೂಹವನ್ನು ಅವರ ಮೌಖಿಕ ಇತಿಹಾಸದ ಆಧಾರದ ಮೇಲೆ, ‘ಸಾರಸ್ವತ’ ಮತ್ತು ‘ಸಾರಸ್ವತೇತರ’ ಗುಂಪುಗಳಾಗಿ ವಿಶಾಲವಾಗಿ ವಿಂಗಡಿಸಬಹುದು (ಅವರ ಮೂಲವು ಸರಸ್ವತಿ ನದಿಯ ದಂಡೆಯಲ್ಲಿದೆಯೇ ಎಂಬುದರ ಆಧಾರದ ಮೇಲೆ). ಈ ಅಧ್ಯಯನದಲ್ಲಿ, ಸಂಶೋಧಕರು ಕೊಂಕಣಿ ಸಮುದಾಯದ ಮಾತೃ ಮೂಲವನ್ನು ಕಂಡುಹಿಡಿಯಲು ೨೯೫ ಕೊಂಕಣಿಗರ ಮಾತೃವಂಶದಿಂದ ಬಳುವಳಿಯಾಗಿ ಬಂದ ಮೈಟೊಕಾಂಡ್ರಿಯಲ್ ಡಿಎನ್ಎ ಯನ್ನು ವಿಶ್ಲೇಷಿಸಿದ್ದಾರೆ. ಒಟ್ಟಾರೆ ಮಾತೃ ಆನುವಂಶಿಕತೆಯು ಸ್ಥಳೀಯ ಮೂಲದ್ದಾಗಿದ್ದರೂ , ಸಾರಸ್ವತೇತರ ಗುಂಪುಗಳಿಗೆ ಹೋಲಿಸಿದರೆ ಸಾರಸ್ವತ ಗುಂಪುಗಳು ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ-ಸಂಬಂಧಿತ ವಂಶಾವಳಿಗಳೊಂದಿಗೆ ಸ್ವಲ್ಪ ಹೆಚ್ಚಿನ ಸಾಮೀಪ್ಯವನ್ನು ಪ್ರದರ್ಶಿಸುತ್ತವೆ ಎಂದು ಅವರು ಕಂಡುಕೊಂಡಿದ್ದಾರೆ. ಪ್ರಾಚೀನ ವಂಶಾವಳಿಗಳೊಂದಿಗೆ ಇದನ್ನು ನೋಡಿದಾಗ, ದಕ್ಷಿಣ ಏಷ್ಯಾಕ್ಕೆ ಕಂಚಿನ ಯುಗದ ವಲಸೆಗಳು ಕೇವಲ ಪುರುಷ-ಆಧಾರಿತವಾಗಿರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಈ ಅಧ್ಯಯನದ ಪ್ರಮುಖ ಲೇಖಕ ಡಾ. ಜೈಸನ್ ಸಿಕ್ವೇರಾ, ಕೊಂಕಣಿ ಸಮುದಾಯಗಳ ಬಹು-ಪದರದ ಆನುವಂಶಿಕತೆಯನ್ನು ಒತ್ತಿಹೇಳಿದ್ದಾರೆ. “ಸಂಪೂರ್ಣ ಮೈಟೊಕಾಂಡ್ರಿಯಲ್ ಜೀನೋಮ್ಗಳನ್ನು ಪರೀಕ್ಷಿಸುವ ಮೂಲಕ, ಕೊಂಕಣಿ ಸಮುದಾಯಗಳನ್ನು ಒಗ್ಗೂಡಿಸುವ ಮತ್ತು ಪ್ರತ್ಯೇಕಿಸುವ ಶ್ರೀಮಂತ ಆನುವಂಶಿಕತೆಯನ್ನು ನಾವು ಅನಾವರಣಗೊಳಿಸಿದ್ದೇವೆ. ಇದು ಸಾವಿರಾರು ವರ್ಷಗಳಿಂದ ಭೂಗೋಳ, ಹವಾಮಾನ ಮತ್ತು ಸಂಸ್ಕೃತಿಯಿಂದ ರೂಪುಗೊಂಡಿದೆ” ಎಂದು ಅವರು ಹೇಳಿದರು.
ಸಂಶೋಧಕರು ಕೊಂಕಣಿ ಸಮುದಾಯದ ಜೀನ್ ಮಾದರಿಯನ್ನು ಯುರೇಷಿಯಾದ ೫,೦೦೦ ಕ್ಕೂ ಹೆಚ್ಚು ಮಾದರಿಗಳೊಂದಿಗೆ ಹೋಲಿಸಿದ್ದಾರೆ. ಕೊಂಕಣಿ ಮಾತೃ ಜೀನ್ ಪೂಲ್ ಆಳವಾದ ದಕ್ಷಿಣ ಏಷ್ಯನ್ ಮತ್ತು ಪಶ್ಚಿಮ ಯುರೇಷಿಯನ್ ವಂಶಾವಳಿಗಳಿಂದ ರೂಪುಗೊಂಡಿದೆ ಎಂಬುದನ್ನು ಈ ವಿಶ್ಲೇಷಣೆಯು ಮತ್ತೊಮ್ಮೆ ದೃಢಪಡಿಸಿದೆ.
“ಮಾತೃ ವೈವಿಧ್ಯತೆಯ ಪ್ರಮುಖ ಭಾಗವು ಪ್ರಾಚೀನ ಮೂಲದಿಂದ ಬಂದ ವಂಶಾವಳಿಗಳಿಂದ ಬಂದಿದೆ, ಇದು ಬಹುಶಃ ‘ಲಾಸ್ಟ್ ಗ್ಲೇಸಿಯಲ್ ಮ್ಯಾಕ್ಸಿಮಮ್’ (೨೬,೫೦೦ ರಿಂದ ೧೯,೦೦೦ ವರ್ಷಗಳ ಹಿಂದೆ) ಸಮಯದಲ್ಲಿ ನಿಯರ್ ಈಸ್ಟ್ ಪ್ರದೇಶದಲ್ಲಿ ಹುಟ್ಟಿಕೊಂಡಿರಬಹುದು. ಈ ವಂಶಾವಳಿಗಳು ಲಾಸ್ಟ್ ಗ್ಲೇಸಿಯಲ್ ಮ್ಯಾಕ್ಸಿಮಮ್ ನಂತರದ ಚೇತರಿಕೆಯ ಹಂತ (~೧೯,೦೦೦ ವರ್ಷಗಳ ಹಿಂದೆ) ಮತ್ತು ಹೋಲೋಸೀನ್ (೯,೭೦೦ ವರ್ಷಗಳ ಹಿಂದೆ) ಚಲನೆಗಳಿಂದಾಗಿ ಒಗ್ಗೂಡಿದವು” ಎಂದು ಪ್ರೊ. ಮುಶ್ತಾಕ್ ಹೇಳಿದರು.
ಖಾರ್ವಿ ಮತ್ತು ಕುಡುಬಿಯಂತಹ ವೃತ್ತಿಪರ ಸಮೂಹಗಳಲ್ಲಿ ಚಾರಿತ್ರಿಕ ಸಂಸ್ಥಾಪಕ ಘಟನೆಗಳು ಮತ್ತು ಸುದೀರ್ಘಾವಧಿಯ Endogamy, ಆನುವಂಶಿಕ ಬದಲಾವಣೆಗಳ ಪ್ರಭಾವವನ್ನು ಈ ಅಧ್ಯಯನವು ಕಂಡುಕೊಂಡಿದೆ. ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕ್ಯಾಥೋಲಿಕ್ ಸಮುದಾಯಗಳು ಹೆಚ್ಚಿನ ಆನುವಂಶಿಕ ವೈವಿಧ್ಯತೆಯನ್ನು ತೋರಿಸುತ್ತವೆ ಎಂದೂ ಅಧ್ಯಯನ ತಿಳಿಸಿದೆ.
“ಅನುವಂಷಿಕ ವೈವಿಧ್ಯತೆಗೆ ಹೆಸರಾದ ದಕ್ಷಿಣ ಏಷ್ಯಾದ ಜನರ ಇತಿಹಾಸದ ಗ್ರಹಿಕೆಯಲ್ಲಿನ ಪ್ರಮುಖ ಅಂತರವನ್ನು ನಮ್ಮ ಅಧ್ಯಯನವು ತುಂಬುತ್ತದೆ. ಸಾರಸ್ವತ ಗುಂಪುಗಳಲ್ಲಿ ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ-ಸಂಬಂಧಿತ ಮಾತೃ ವಂಶಾವಳಿಗಳ ಉಪಸ್ಥಿತಿಯು, ಪ್ರಾಚೀನ ವಲಸೆಗಳು ಮಾತೃ ಮತ್ತು ಪಿತೃ ಇಬ್ಬರ ಕೊಡುಗೆಗಳನ್ನೂ ಒಳಗೊಂಡ ಸಂಕೀರ್ಣ, ಬಹುಮುಖಿ ಘಟನೆಗಳಾಗಿದ್ದವು ಎಂಬುದನ್ನು ತೋರಿಸುತ್ತದೆ” ಎಂದು ಡಾ. ತಂಗರಾಜ್ ಹೇಳಿದರು.
ಭಾರತದ ಪಶ್ಚಿಮ ಕರಾವಳಿಯ ಜನಾಂಗೀಯ-ಭಾಷಿಕ ಇತಿಹಾಸವನ್ನು ದಾಖಲಿಸುವಲ್ಲಿ ಕೊಂಕಣಿ ಸಮುದಾಯದ ಆನುವಂಶಿಕ ಚಿತ್ರಣವು ಒಂದು ಪ್ರಮುಖ ಕೊಂಡಿಯಾಗಿದೆ ಎಂದು CSIR-CCMB ಯ ನಿರ್ದೇಶಕ ಡಾ. ವಿನಯ್ ಕುಮಾರ್ ನಂದಿಕೂರಿ ಹೇಳಿದರು.
ಬರ್ನ್ ವಿಶ್ವವಿದ್ಯಾಲಯದ ಭಾಷಾವಿಜ್ಞಾನಿ ಪ್ರೊ. ಜಾರ್ಜ್ ವ್ಯಾನ್ ಡ್ರೀಮ್ ಮತ್ತು ಲಕ್ನೋದ BSIP ಯ ಡಾ. ಲೊಮಸ್ ಕುಮಾರ್ ಈ ಅಧ್ಯಯನದ ಇತರ ಲೇಖಕರಾಗಿದ್ದಾರೆ.

