ಬಂಗಾಳ ಕೊಲ್ಲಿಯಲ್ಲಿ ವಾಯುಭಾರಕುಸಿತ ಆಗುತ್ತಿದ್ದಂತೆ ರಾಜ್ಯದಲ್ಲಿ ನಿನ್ನೆಯೇ ಮಳೆ ಪ್ರಮಾಣ ಕಡಿಮೆ ಆಗಿದೆ. ಕರಾವಳಿಯ ದ.ಕ. ಉಡುಪಿ ಉ.ಕ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಿದ್ದು ಸುಳ್ಯ ಪುತ್ತೂರು ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದೆ. ಮಲೆನಾಡಿನ ಅಲ್ಲಲ್ಲಿ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಿದೆ. ರಾಮನಗರ ತುಮಕೂರು ಮೈಸೂರು ಮಂಡ್ಯ ಜಿಲ್ಲೆಗಳ ಹಲವು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಚಿಕ್ಕಹಳ್ಳಿಯಲ್ಲಿ 143.5mm ಗರಿಷ್ಠ ಮಳೆಯಾಗಿದೆ.


ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯಲ್ಲಿ ಮೋಡ- ಬಿಸಿಲಿನ ವಾತಾವರಣ ಇರಲಿದ್ದು ಮಧ್ಯಾಹ್ನನಂತರ ದ.ಕ. ಜಿಲ್ಲೆಯ ಸುಳ್ಯ ಪುತ್ತೂರು ಬೆಳ್ತಂಗಡಿ ತಾಲ್ಲೂಕುಗಳ ಅಲ್ಲಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ಉಡುಪಿ ಉ.ಕ ಜಿಲ್ಲೆಗಳಲ್ಲಿ ಬಹುತೇಕ ಒಣಹವೆಯ ಮುನ್ಸೂಚನೆ ಇದೆ.ಕೇರಳ ಸಮೀಪದ ಲೋ ಪ್ರೆಷರ್ ಶಿಥಿಲ ಆಗಿದ್ದು ಇವತ್ತಿನಿಂದ ಮಳೆ ಕಡಿಮೆ ಆಗಬಹುದು.
ಮಲೆನಾಡಿನಲ್ಲಿಯೂ ನಿನ್ನೆ ಮುನ್ಸೂಚನೆಗಿಂತ ಕಡಿಮೆ ಮಳೆಯಾಗಿದೆ. ಕೊಡಗು ಜಿಲ್ಲೆಯ ಕೆಲವಡೆ ಸಣ್ಣ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಇನ್ನೊಂದು ವಾರ ಮಳೆ ಬಹುತೇಕ ಕಡಿಮೆ ಆಗಲಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ ಮೈಸೂರು ರಾಮನಗರ ಜಿಲ್ಲೆಗಳ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಕೋಲಾರ ಚಿಕ್ಕಬಳ್ಳಾಪುರ ಮಂಡ್ಯ ಬೆಂಗಳೂರು – ಗ್ರಾಮಾಂತರ ತುಮಕೂರು ಜಿಲ್ಲೆಗಳ ಕೆಲವಡೆ ತುಂತುರು ಉತ್ತಮ ಮಳೆಯ ಮುನ್ಸೂಚನೆ ಇದೆ. ನಾಳೆ ಚಾಮರಾಜನಗರ ಮೈಸೂರು ಹೊರತುಪಡಿಸಿ ಉಳಿದೆಡೆ ಒಣಹವೆ ಆರಂಭವಾಗಬಹುದು. ಅ 27ರಿಂದ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಬಹುದು. ನವೆಂಬರ್ ಮೊದಲ ವಾರ ಮತ್ತೆ ಅಲ್ಲಲ್ಲಿ ಸ್ವಲ್ಪ ಮಳೆಯಾಗಬಹುದು.
ಉತ್ತರ ಒಳನಾಡಿನಲ್ಲಿ ಇವತ್ತು ಬಿಸಿಲಿನ ವಾತಾವರಣ ಇರಲಿದ್ದು ಹಗಲಿನ ಗರಿಷ್ಠ ತಾಪಮಾನ ಏರಿಕೆ ಆಗಬಹುದು. ಮಳೆಯಾಗುವ ಸಾಧ್ಯತೆ ಕಡಿಮೆ. ಇನ್ನು ಈ ಭಾಗದಲ್ಲಿ ಮಳೆ ಕಡಿಮೆ ಆಗಬಹುದು.

ಅರಬ್ಬೀಸಮುದ್ರದಲ್ಲಿ ಕೇರಳ ಸಮೀಪ ಇರುವ ಲೋ ಪ್ರೆಷರ್ ಗಾಳಿಯ ತಿರುಗುವಿಕೆ ದುರ್ಬಲ ಆಗಿದ್ದು ಇವತ್ತು ಕೇರಳದ ಕೊಚ್ಚಿ – ಕೋಝಿಕ್ಕೋಡ್ ಮಧ್ಯ ಭೂಭಾಗ ಪ್ರವೇಶಿಸಿ ತಮಿಳುನಾಡು ಮೂಲಕ ಮುಂದುವರೆಯಬಹುದು. ಬಂಗಾಳಕೊಲ್ಲಿಯಲ್ಲಿ ಅಂಡಮಾನ್ ಉತ್ತರದಲ್ಲಿರುವ ಲೋ ಪ್ರೆಷರ್ ವಾಯುಭಾರಕುಸಿತವಾಗಿ ಚಂಡಮಾರುತ ಆಗುವ ಮುನ್ಸೂಚನೆ ಇದ್ದ ಕಾರಣ ಅರ್ನಬ್ ಚಂಡಮಾರುತ ಎಂದು ಹೆಸರಿಸಲಾಗಿದೆ. ಶ್ರೀಲಂಕಾ ಸಮೀಪ ನಾಳೆ ಗಾಳಿಯ ತಿರುಗುವಿಕೆ ಆರಂಭ ಆಗಲಿದ್ದು ಈ ಎರಡು ಸರ್ಕ್ಯುಲೇಷನ್ ಒಟ್ಟು ಸೇರಿ ಚಂಡಮಾರುತ ಆಗಿ ಅ 27 ರಾತ್ರಿ ಆಂಧ್ರದ ಮಚಲೀಪಟ್ಟಣ ಮೂಲಕ ಚಲಿಸುವ ಸಾಧ್ಯತೆ ಇದೆ. ಆದರೇ ಇದು ಆರಂಭದಲ್ಲಿಯೇ ದುರ್ಬಲ ಆಗಬಹುದು. ಗಾಳಿಯ ತಿರುಗುವಿಕೆ ಆಂಧ್ರದಿಂದ ಮಧ್ಯಭಾರತ ಕಡೆಗೆ ಚಲಿಸುತ್ತಿದ್ದಂತೆ ಹಿಂಗಾರು ಮಾರುತಗಳನ್ನು ಸೆಳೆಯುವ ಕಾರಣ ದಕ್ಷಿಣ ಭಾರತದಲ್ಲಿ ಮಳೆ ಪೂರ್ತಿ ಕಡಿಮೆ ಆಗಬಹುದು. ನವೆಂಬರ್ ಮೊದಲ ವಾರ ಇನ್ನೊಂದು ಲೋ ಪ್ರೆಷರ್ ಆಗಲಿದ್ದು ಇದರಿಂದಾಗಿ ಹಿಂಗಾರು ಮಾರುತಗಳು ಸಹಜ ಸ್ಥಿತಿಗೆ ಬರಬಹುದು.

