
ಬೆಳ್ತಂಗಡಿ: ಗುರುವಾಯನಕೆರೆ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದುಸ್ಥಿತಿಯನ್ನು ಖಂಡಿಸಿ SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕಲ್ಲೇರಿ ಜಂಕ್ಷನ್‌ನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನಾ ಧರಣಿಯ ಬಳಿಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕಾರ್ಯಕ್ಕೆ ಮುಂದಾಗಿರುವುದನ್ನು SDPI ಕಣಿಯೂರು ಬ್ಲಾಕ್ ಅಧ್ಯಕ್ಷ ಆಸಿಫ್ ಬಂಗೇರಕಟ್ಟೆ ಸ್ವಾಗತಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ಅವರು ಮನವಿ ಸ್ವೀಕರಿಸಿ ದುರಸ್ತಿ ಕಾರ್ಯದ ಭರವಸೆ ನೀಡಿದ್ದರು. ಅದರಂತೆ ತಾತ್ಕಾಲಿಕ ದುರಸ್ತಿ ಆರಂಭಿಸಿರುವುದು ಸ್ವಾಗತಾರ್ಹ. ಆದರೆ, ಧರಣಿಯ ಸಂದರ್ಭದಲ್ಲೇ ಕೇವಲ ಗುಂಡಿಗಳಿಗೆ ತೇಪೆ ಹಚ್ಚುವ ಕಾಮಗಾರಿಯಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.

ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲಾಗುವುದು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುವುದು.

ಶಾಲಾ ಮಕ್ಕಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೋಗಿಗಳು ಸೇರಿದಂತೆ ನಿತ್ಯ ಸಂಚರಿಸುವ ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಸಂಬಂಧಪಟ್ಟ ಇಲಾಖೆಯು ತಾತ್ಕಾಲಿಕ ಕ್ರಮಕ್ಕೆ ಸೀಮಿತವಾಗದೆ ಸಂಪೂರ್ಣ ರಸ್ತೆಯ ಮರುಡಾಂಬರೀಕರಣಕ್ಕೆ ಮುಂದಾಗಬೇಕು. ಕಾಮಗಾರಿಯ ಗುಣಮಟ್ಟವನ್ನು ಖಾತರಿಪಡಿಸುವುದರ ಜೊತೆಗೆ ಶಾಶ್ವತ ಕಾಮಗಾರಿಗೆ ಸ್ಪಷ್ಟ ಕಾಲಮಿತಿಯನ್ನೂ ಪ್ರಕಟಿಸಬೇಕು. ಶಾಶ್ವತ ಕಾಮಗಾರಿ ಕೈಗೊಳ್ಳುವವರೆಗೆ SDPI ಹೋರಾಟ ಮುಂದುವರಿಯಲಿದೆ ಎಂದು ಆಸಿಫ್ ಬಂಗೇರಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


