ಭಟ್ಕಳ: ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ಶ್ರೀವಲ್ಲಿ ಪ್ರೌಢಶಾಲೆ, ಚಿತ್ರಾಪುರ ಶಿರಾಲಿಯ ವಿದ್ಯಾರ್ಥಿನಿ ನಿನಾದ ಉಮೇಶ ಮುಂಡಳ್ಳಿ ಸೃಜನಾತ್ಮಕ ಬರವಣಿಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ನವೆಂಬರ್ 4ರಂದು ಕಾರವಾರದ ಸ್ತ್ರೀಶಕ್ತಿ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ನಿನಾದ ತನ್ನ ಸೃಜನಶೀಲ ಬರವಣಿಗೆಯ ಪ್ರತಿಭೆಯನ್ನು ಅದ್ಭುತವಾಗಿ ಅನಾವರಣಗೊಳಿಸಿದ್ದಾಳೆ. ಸ್ಥಳದಲ್ಲಿಯೇ ನೀಡಲಾದ ವಿಷಯ ಹಾಗೂ ಸಮಯದ ಮಿತಿಯೊಳಗೆ ಸ್ವರಚಿತ ಕಥೆ, ಕವನ ಮತ್ತು ಪ್ರಬಂಧಗಳನ್ನು ಏಕಕಾಲದಲ್ಲಿ ಬರೆದು ಪೂರ್ಣಗೊಳಿಸುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ, ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಭಾ.ಆ.ಸೇ., ಜಿಲ್ಲಾ ಬಾಲಭವನ ಸಮಿತಿಯ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಪದ್ಮಾವತಿ ಜಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಶ್ರೀ ಮಹಾದೇವಪ್ಪ ಇಸರನಾಳ, ಜಿಲ್ಲಾ ಬಾಲಭವನ ಸೊಸೈಟಿಯ ಕಾರ್ಯಕ್ರಮ ಸಂಯೋಜಕಿ ಕುಮಾರಿ ಅಪೇಕ್ಷಾ ಶಿರೋಡಕರ, ಕಚೇರಿ ಸಹಾಯಕಿ ಶ್ರೀಮತಿ ಪ್ರೀತಿ ನಾಯ್ಕ ಮೊದಲಾದ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು.

ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಲೇಖಕ, ಪ್ರಕಾಶಕ ಹಾಗೂ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಮತ್ತು ಶಿಕ್ಷಕಿ, ಲೇಖಕಿ ರೇಷ್ಮಾ ಉಮೇಶ ದಂಪತಿಗಳ ಪುತ್ರಿಯಾಗಿರುವ ನಿನಾದಳಿಗೆ ಸಾಹಿತ್ಯ ಮತ್ತು ಸಂಗೀತದ ವಾತಾವರಣ ಬಾಲ್ಯದಿಂದಲೇ ಒದಗಿಬಂದಿದೆ. ಈಗಾಗಲೇ ಅನೇಕ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ತಂದೆಯೊಂದಿಗೆ ತನ್ನ ಸುಮಧುರ ಕಂಠದ ಮೂಲಕ ಗಾಯನ ಪ್ರಸ್ತುತಪಡಿಸಿ ಗಮನ ಸೆಳೆದಿದ್ದಾಳೆ. ಇದೀಗ ಸಂಗೀತದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತನ್ನ ಸೃಜನಶೀಲ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ನಿನಾದಳ ಈ ಸಾಧನೆಗೆ ಶ್ರೀವಲ್ಲಿ ಪ್ರೌಢಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ, ಪೋಷಕರು, ಬಂಧುಗಳು ಮತ್ತು ಊರಿನ ಗಣ್ಯರು ಅಭಿನಂದನೆ ಸಲ್ಲಿಸಿದ್ದು, ರಾಜ್ಯಮಟ್ಟದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿ ಭಟ್ಕಳಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.

