ಸರಸ್ವತಿ ಶಾಲೆಯಲ್ಲಿ ಗೋಸಮ್ಮಾನ್ ಅಭಿಯಾನದ ಸಹಿ ಸಂಗ್ರಹಕ್ಕೆ ಚಾಲನೆ

ಕಡಬ: ಕಡಬ ತಾಲೂಕಿನ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ಸರಸ್ವತಿ ಶಾಲೆಯಲ್ಲಿ ಗೋಸಮ್ಮಾನ್ ಆಹ್ವಾನ ಅಭಿಯಾನದ ಅಂಗವಾಗಿ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗೋಸಮ್ಮಾನ್ ಆಹ್ವಾನ ಅಭಿಯಾನ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಜಿಲ್ಲೆಯ ಸಮಸ್ತ ಗೋಭಕ್ತರು, ಗೋಪ್ರೇಮಿಗಳು ಮತ್ತು ಗೋಸೇವಕರ ಸಹಭಾಗಿತ್ವದಲ್ಲಿ ಈ ಬಾರಿ ಗೋಪಾಷ್ಟಮಿಯನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ 6ರೊಳಗೆ ಜಿಲ್ಲೆಯ ಪ್ರತಿಯೊಂದು ಗ್ರಾಮ, ವಸತಿ ಪ್ರದೇಶ ಹಾಗೂ ತಾಲೂಕು ಮಟ್ಟದಲ್ಲಿ ಗೋಸೇವಕರನ್ನು ಒಗ್ಗೂಡಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ.

ಶ್ರೀಕೃಷ್ಣನು ಪ್ರಪ್ರಥಮವಾಗಿ ಕರುಗಳೊಂದಿಗೆ ಗೋಮಾಳಕ್ಕೆ ತೆರಳಿ ಗೋಪಾಲಕನಾಗಿ ತನ್ನ ಲೀಲೆಗಳನ್ನು ಆರಂಭಿಸಿದ ಪವಿತ್ರ ದಿನವೇ ಗೋಪಾಷ್ಟಮಿ. ಈ ದಿನ ದೇಶೀಯ ಗೋತಳಿಗಳನ್ನು ಸಾಕಿ ಸಲಹುತ್ತಿರುವ ಗೋಪಾಲಕರ ಮನೆಗಳಿಗೆ ಭೇಟಿ ನೀಡಿ ಅಥವಾ ಅವರ ಸಹಭಾಗಿತ್ವದಲ್ಲಿ ಗೋಮಾತೆಯ ಆರಾಧನೆ ನಡೆಸಲಾಗುವುದು. ಪ್ರತಿಯೊಬ್ಬ ಗೋಭಕ್ತರೂ ತನು, ಮನ ಹಾಗೂ ಧನದ ಮೂಲಕ ಗೋಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಗೋಮಾತೆಗೆ ಕನಿಷ್ಠ ಒಂದು ಬಾಳೆಹಣ್ಣು ಅಥವಾ ಆಕೆಗೆ ಪ್ರಿಯವಾದ ಆಹಾರವನ್ನು ಸಮರ್ಪಿಸುವ ಮೂಲಕ ಭಕ್ತಿ ಸಲ್ಲಿಸಬೇಕು ಎಂದು ಸಮಿತಿ ಮನವಿ ಮಾಡಿದೆ.

ಇದೇ ಸಂದರ್ಭದಲ್ಲಿ 1966ರ ಗೋಪಾಷ್ಟಮಿಯಂದು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಸಂಸತ್ ಭವನದ ಎದುರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸಾಧು-ಸಂತರ ಮೇಲೆ ನಡೆದ ಗೋಲಿಬಾರ್ ಹಾಗೂ ಗೋಸಂರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಸಂತರ ಬಲಿದಾನವನ್ನು ಸ್ಮರಿಸಲಾಗುವುದು. ಅಂದು ಗೋಹತ್ಯೆ ನಿಷೇಧದ ಭರವಸೆ ಈಡೇರದ ಹಿನ್ನೆಲೆಯಲ್ಲಿ ನಡೆದ ಈ ದುರಂತ ಘಟನೆ ದೇಶದ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯವಾಗಿದೆ.

ಗೋಮಾತೆಯ ರಕ್ಷಣೆ ಸಮಾಜದ, ಪರಿಸರದ ಹಾಗೂ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಗೋಪಾಷ್ಟಮಿಯಂದು ಎಲ್ಲ ಗೋಭಕ್ತರು ಒಗ್ಗೂಡಿ ಗೋಸಂರಕ್ಷಣೆಯ ಕುರಿತು ಚಿಂತನೆ ನಡೆಸಿ, ಗೋಹತ್ಯೆ ನಿಷೇಧಕ್ಕಾಗಿ ದೃಢ ಸಂಕಲ್ಪ ಹಾಗೂ ಶಪಥ ಸ್ವೀಕರಿಸಬೇಕು. ಅಲ್ಲದೆ, ಗೋ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಗೋಪಾಲಕರಿಗೆ ಆರ್ಥಿಕವಾಗಿ ಸಹಕಾರ ನೀಡಬೇಕು ಎಂದು ಗೋಸಮ್ಮಾನ್ ಆಹ್ವಾನ ಅಭಿಯಾನ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಹ-ಪ್ರಭಾರಿ ಅಶೋಕ್ ಇಳಂತಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!