ಬಂಟ್ವಾಳ:* ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ, ಸರ್ವಧರ್ಮೀಯರ ಭಕ್ತಿಯ ಶ್ರದ್ಧಾಕೇಂದ್ರವಾದ ಅಜಿಲಮೊಗರು ಜುಮಾ ಮಸೀದಿಯಲ್ಲಿ 754ನೇ ಮಾಲಿದಾ ಉರೂಸ್ ನವೆಂಬರ್ 21ರಿಂದ 25ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಹಾಜಿ ಪಿ.ಬಿ. ಅಬ್ದುಲ್ ಹಮೀದ್ ತಿಳಿಸಿದರು.

ಮಸೀದಿಯ ಸಂಸ್ಥಾಪಕರೂ ಪವಾಡ ಪುರುಷರೂ ಆದ ಹಜರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ವಲಿ (ರ.ಅ.) ಅವರ ಸ್ಮರಣಾರ್ಥ ಪ್ರತಿವರ್ಷ ನಡೆಯುವ ಈ ಉರೂಸ್ನಲ್ಲಿ ಸರ್ವಧರ್ಮೀಯ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನವೆಂಬರ್ 21ರಂದು ಶನಿವಾರ ಮಗ್ರಿಬ್ ನಮಾಝಿನ ಬಳಿಕ ಸಯ್ಯಿದ್ ಜಲ್ಫರ್ ಸ್ವಾದಿಕ್ ತಂಗಳ್ ಕುಂಬೋಳ್ ಅವರ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದೆ. ನವೆಂಬರ್ 22ರಂದು ಭಾನುವಾರ ಭಂಡಾರದ ಹರಕೆ ಆರಂಭವಾಗಲಿದ್ದು, ಮಗ್ರಿಬ್ ನಮಾಝಿನ ಬಳಿಕ ಸಯ್ಯಿದ್ ಮುಖಾರ್ ತಂಗಳ್ ಕುಂಬೋಳ್ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

ನವೆಂಬರ್ 23ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಊರ ಹಾಗೂ ಪರವೂರ ಮಹನೀಯರ ಕೊಡುಗೆಯೊಂದಿಗೆ ಮಾಲಿದಾ ಹರಕೆ ಆರಂಭವಾಗಲಿದೆ. ಮಗ್ರಿಬ್ ನಮಾಝಿನ ಬಳಿಕ ಬದ್ರುಸ್ವಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲ್ ಬುಖಾರಿ ತಂಗಳ್ ಕಡಲುಂಡಿ ಅವರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ನೌಫಲ್ ಸಖಾಫಿ ಕಳಸ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ನವೆಂಬರ್ 24ರಂದು ಮಂಗಳವಾರ ಬೆಳಗ್ಗೆ 8 ಗಂಟೆಗೆ ಮಾಲಿದಾ ವಿತರಣೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸಂಜೆ ಮಗ್ರಿಬ್ ನಮಾಝಿನ ಬಳಿಕ ಬಾಝಿ ಸಯ್ಯಿದ್ ನಾಸಿರ್ ಅಬ್ದುಲ್ ಹಯ್ ಶಿಹಾಬುದ್ದೀನ್ ಬಾ ಅಲವಿ ತಂಗಳ್ ಅವರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಕರೀಂ ಫೈಝಿ ಕುಂತೂರು ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ನವೆಂಬರ್ 25ರಂದು ಬುಧವಾರ ಉರೂಸ್ ಸಮಾರೋಪಗೊಳ್ಳಲಿದ್ದು, ಹಗಲಿನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಕಂದೂರಿ ಊಟ ವಿತರಿಸಲಾಗುವುದು.

ಐದು ದಿನಗಳ ಉರೂಸ್ ಸಂದರ್ಭದಲ್ಲಿ ಪ್ರಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಝಿಯಾರತ್, ಸಾಮೂಹಿಕ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸರ್ವಧರ್ಮೀಯರು ಪಾಲ್ಗೊಳ್ಳುವ ಈ ಉರೂಸ್ಗೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ. ಮಹಿಳೆಯರಿಗೆ ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಉರೂಸ್ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಉತ್ಸವದ ಸಂದರ್ಭದಲ್ಲಿ ಫ್ಯಾನ್ಸಿ ಹಾಗೂ ಆಟಿಕೆಗಳ ವ್ಯಾಪಾರ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಉರೂಸ್ನ ಐದು ದಿನಗಳ ಎಲ್ಲ ಕಾರ್ಯಕ್ರಮಗಳಲ್ಲೂ ಸರ್ವರೂ ಭಾಗವಹಿಸಿ ಸಹಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಸಿನಾನ್ ಸಖಾಫಿ, ಧರ್ಮಗುರುಗಳಾದ ಪಿ.ಎಸ್. ತ್ವಾಹಾ ಸಅದಿ, ಉಪಾಧ್ಯಕ್ಷ ಇಬ್ರಾಹೀಂ ಜಿ. ಅಜಿಲಮೊಗರು, ಆದಂ ಕುಂಞ ನಡುಮೊಗರು ಹಾಗೂ ಸ್ವಾದಿಕ್ ಇಂಜಿನಿಯರ್ ಮಂಗಳೂರು ಉಪಸ್ಥಿತರಿದ್ದರು.

