ಕರಾವಳಿ ಜಾನಪದ ಕ್ರೀಡೆ ಕಂಬಳದಲ್ಲಿ ನೂತನ ವಿಶ್ವ ದಾಖಲೆ… ! , ಕಂಬಳದ ಮಿಂಚಿನ ಓಟಗಾರ ಶ್ರೀನಿವಾಸ ಗೌಡರ ದಾಖಲೆಯನ್ನು ಕಂಬಳ ಗದ್ದೆಯಲ್ಲಿ ಹೆಡೆಮುರಿ ಕಟ್ಟಿದ ಮಾಸ್ತಿಕಟ್ಟೆ ಸ್ವರೂಪ್ …. !

ಮಂಗಳೂರು: ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ರಾಮ-ಲಕ್ಷ್ಮಣ ಜೋಡು ಕರೆ ಮಂಗಳೂರು ಕಂಬಳ ನೂತನ ದಾಖಲೆಗೆ ಸಾಕ್ಷಿಯಾಗಿದೆ . ಈ ಹಿಂದೆ ಕಂಬಳದಲ್ಲಿ ದಾಖಲಾಗಿದ್ದ ಶ್ರೀನಿವಾಸ ಗೌಡರ ದಾಖಲೆಯನ್ನು ಸ್ವರೂಪ್ ಪುಡಿ ಮಾಡಿ ಕಂಬಳ ಲೋಕದ ನೂತನ ಉಸೇನ್ ಬೋಲ್ಟ್ ಎನ್ನುವ ಗರಿಮೆಗೆ ಪಾತ್ರರಾಗಿದ್ದಾರೆ.

ಶನಿವಾರ ಆರಂಭವಾದ ಮಂಗಳೂರು ಕಂಬಳ ಭಾನುವಾರ ಸಮಾರೋಪಗೊಂಡಿದ್ದು ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಸಂದೀಪ್ ಶೆಟ್ಟಿ ಅವರ ಕೋಣಗಳು 125 ಮೀಟರ್ ಉದ್ದದ ಕಂಬಳ ಕರೆಯನ್ನು 10.87 ಸೆಕೆಂಡ್‌ನಲ್ಲೇ ತಲುಪಿ ನೂತನ ದಾಖಲೆ ನಿರ್ಮಿಸಿದೆ

ಈ ದಾಖಲೆಯಯನ್ನು 100 ಮೀಟರ್‌ಗೆ ಪರಿಗಣಿಸಿದಾಗ 8.69 ಸೆಕೆಂಡ್‌ಗಳ ದಾಖಲೆ ಆಗುತ್ತದೆ. ‘ಗಾಂಧಿ ಮೈದಾನ ಸಂತು’ ಹಾಗೂ ‘ಸುರತ್ಕಲ್ ಪಾಂಚ’ ಕೋಣಗಳು ದಾಖಲೆ ನಿರ್ಮಿಸಿವೆ. ಈ ಕೋಣಗಳನ್ನು ಓಡಿಸಿದ ಮಾಸ್ತಿಕಟ್ಟೆ ಸ್ವರೂಪ್ ವಿಶೇಷ ಹಿರಿಮೆಗೆ ಪಾತ್ರರಾಗಿದ್ದಾರೆ.

ಕಕ್ಕೆಪದವಿನಲ್ಲಿ ವರ್ಷಗಳ ಹಿಂದೆ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 8.78 ಸೆಕೆಂಡ್‌ನಲ್ಲಿ 100 ಮೀ. ದೂರ ದಾಟಿ ದಾಖಲೆ ಮಾಡಿದ್ದರು. ಮಂಗಳೂರು ಕಂಬಳದ ಫೈನಲ್‌ನಲ್ಲಿ 100 ಮೀ. ದೂರವನ್ನು 8.69 ಸೆಕೆಂಡ್‌ನಲ್ಲಿ ದಾಟುವ ಮೂಲಕ ಈ ದಾಖಲೆಯನ್ನು ಮಾಸ್ತಿಕಟ್ಟೆ ಸ್ವರೂಪ್ ತನ್ನದಾಗಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ವರೂಪ್ ಅವರು, ”ಕಳೆದ ಮೂರು ವರ್ಷಗಳಿಂದ ಕಂಬಳ ಕೋಣ ಓಡಿಸುತ್ತಿದ್ದೇನೆ. ಈ ಹಿಂದೆ ಜ್ಯೂನಿಯರ್ ವಿಭಾಗದಲ್ಲಿ ಓಡಿಸುತ್ತಿದ್ದೆ. ಈ ವರ್ಷ ಮೊದಲ ಬಾರಿಗೆ ಸೀನಿಯರ್ ವಿಭಾಗದಲ್ಲಿ ಓಡಿಸಿದ್ದೇನೆ. ಸೀನಿಯರ್ ವಿಭಾಗದಲ್ಲಿ 3 ಕಂಬಳಗಳಲ್ಲಿ ಭಾಗವಹಿಸಿದ್ದೇನೆ. ಇದೀಗ ಈ ದಾಖಲೆ ಸಾಧ್ಯವಾಗಿದೆ. ಇದು ಅನಿರೀಕ್ಷಿತ ಸಾಧನೆ” ಎಂದು ಸಂತಸ ವ್ಯಕ್ತಪಡಿಸಿದರು.

ರೆಕಾರ್ಡ್ ಮಾಡಿದ ಕೋಣಗಳ ಮಾಲೀಕ ಸಂದೀಪ್ ಶೆಟ್ಟಿ ಮಾತನಾಡಿ, “ಈ ರೆಕಾರ್ಡ್ ಮಾಡಿದ ಕೋಣಗಳು ಕಳೆದ ಬಾರಿ ಇದೇ ಕಂಬಳದಲ್ಲಿ ಹಗ್ಗ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದವು. ಸ್ವರೂಪ್ ಕಳೆದ ವರ್ಷದವರೆಗೆ ಜ್ಯೂನಿಯರ್ ವಿಭಾಗದಲ್ಲಿ ಓಡಿಸುತ್ತಿದ್ದರು. ಈ ವರ್ಷ ಸೀನಿಯರ್ ವಿಭಾಗದಲ್ಲಿ ಓಡಿಸಿದ್ದಾರೆ. ತುಂಬಾ ಛಲದ ಯುವಕ. ಈ ಬಾರಿಯ ರೆಕಾರ್ಡ್‌ಗೆ ಕೋಣಗಳು ಮತ್ತು ಸ್ವರೂಪ್ ಅವರ ಕೊಡುಗೆ ಇದೆ. ಈ ರೆಕಾರ್ಡ್ ಅನಿರೀಕ್ಷಿತ” ಎಂದು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!