ಅಯ್ಯಪ್ಪ ಮಾಲಾಧಾರಿ ಯಾತ್ರೆ ವೇಳೆ ಹೃದಯಾಘಾತಕ್ಕೆ ಬಲಿ

ಉಳ್ಳಾಲ : ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸೋಮೇಶ್ವರದ ಪಿಲಾರು ದೇಲಂತಬೆಟ್ಟು ನಿವಾಸಿ ಚಂದ್ರಹಾಸ್ ಶೆಟ್ಟಿ (55) ಹೃದಯಾಘಾತದಿಂದ ನಿಧನರಾಗಿದ್ದಾರೆ.ಕೇರಳದ ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚಂದ್ರಹಾಸ್ ಅವರು ಸಹಪಾಠಿ ಅಯ್ಯಪ್ಪ ಮಾಲಾ ವ್ರತಾಧಾರಿಗಳ ಜೊತೆ ಶನಿವಾರ ಅರ್ಕುಳ ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು.

ಚಂದ್ರಹಾಸ್ ಅವರು ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.ಚಂದ್ರಹಾಸ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್ ಅವರು ಕೇರಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ನಾಳೆ ಬೆಳಗ್ಗೆ ಪಾರ್ಥಿವ ಶರೀರ ಉಳ್ಳಾಲ ತಲುಪಲಿದೆ.

ಮೃತ ಚಂದ್ರಹಾಸ್ ಅವರು ಮೂಲತಃ ಬಾಕ್ರಬೈಲ್ ನಿವಾಸಿಯಾಗಿದ್ದು, ಮಿನರಲ್ ವಾಟರ್ ಪೂರೈಕೆಯ ಉದ್ಯಮ ನಡೆಸುತ್ತಿದ್ದರು. ಕಳೆದ ಹತ್ತು ವರ್ಷದಿಂದ ಪತ್ನಿಯ ಊರು ಪಿಲಾರಿನಲ್ಲೇ ಮನೆ ನಿರ್ಮಿಸಿ ವಾಸವಾಗಿದ್ದರು. ಇತ್ತೀಚೆಗಷ್ಟೆ ಪುತ್ರಿಯ ವಿವಾಹವನ್ನು ಅದ್ಧೂರಿಯಾಗಿ ನಡೆಸಿದ್ದರು. ಇದೀಗ ಶಬರಿಮಲೆ ತೆರಳಿದ್ದ ಚಂದ್ರಹಾಸ್ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದು ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ. ಮೃತರು ಪತ್ನಿ, ಪುತ್ರಿ, ಪುತ್ರನನ್ನ ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!