ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಿದ್ದತೆಯನ್ನು ನಡೆಸುತ್ತಿದ್ದು, ಈ ಸಮೀಕ್ಷೆಯಲ್ಲಿ ಒಂದೇ ಜಾತಿಯಾಗಿರುವ ಬಂಟರುಯಾನೆ ನಾಡವರನ್ನು ಬಂಟರು ಮತ್ತು ನಾಡವರೆಂದು ಪ್ರತ್ಯೇಕ ಜಾತಿಗಳೆಂದು ಗುರುತ್ತಿಸಲಾಗಿದೆ , ನಾವು ಇದನ್ನು ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ಸ್ವೀಕರ್ ಮತ್ತು ಸರಕಾರದದ ಗಮನಕ್ಕೆ ತಂದಿದ್ದೇವೆ . ನಾಡವರು ಮತ್ತು ಬಂಟರು ಅನಾದಿ ಕಾಲದಿಂದಲೂ ಒಂದೇ ಆಗಿರುವ ಕಾರಣ ಪ್ರತ್ಯೇಕವಾಗಿ ಗಣತಿಯಲ್ಲಿ ಜಾತಿಯನ್ನು ನಮೂದು ಮಾಡಬಾರದೆಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ತಿಳಿಸಿದರು.
ಅವರು ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಇತ್ತೀಚೆಗೆ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ ವರದಿಯಲ್ಲಿ ಬಂಟರ ಅಥವಾ ನಾಡವರ ಜನಸಂಖ್ಯೆ ಮೂರು ಲಕ್ಷದ ಹದಿನೈದು ಸಾವಿರ ಇದೆ ಎಂದು ನಮೂದಿಸಲಾಗಿತ್ತು .
ಆದರೆ ಉಡುಪಿ, ದ.ಕ ಜಿಲ್ಲೆ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಂದಾಜು ಇಪ್ಪತ್ತು ಲಕ್ಷಕ್ಕಿಂತ ಹೆಚ್ಚು ಬಂಟ ಸಮಾಜದವರು ಇರುವ ಸಾಧ್ಯತೆ ಇದೆ . ಹೀಗಾಗಿ ಕಾಂತರಾಜ್ ವರದಿಯು ಅವೈಜ್ಞಾನಿಕವಾಗಿದ್ದು ಮತ್ತು ಅದು ಕಾಲ ಬಾದಿತವಾಗಿರುವ ಕಾರಣ ಅದನ್ನು ಮಂಡಿಸಬಾರದೆಂದು ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ .
ನಮ್ಮ ಸಮಾಜದ ಒಟ್ಟು ಜನಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿದು ಕೊಳ್ಳಲು ಹಾಗೂ ಕೂಲಂಕುಶ ಅಧ್ಯಯನ ಮಾಡಲು ‘ ಬಾಂಧವ್ಯ’ ಎಂಬ ಹೆಸರಿನ ಆ್ಯಪ್ ನ ಸಹಾಯದಿಂದ ವಿಶ್ವದಾದ್ಯಂತ ಇರುವ ಬಂಟರ/ನಾಡವರ ಆರ್ಥಿಕ , ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ವಿಷಯಗಳ ಬಗ್ಗೆ ಸಮೀಕ್ಷೆ ಮಾಡಿ ವಿಶ್ವ ಬಂಟರ ಮಾಹಿತಿಕೋಶವನ್ನು ತಯಾರಿಸುವ ಕಾರ್ಯಯೋಜನೆಯನ್ನು ಹಾಕಿದ್ದೇವೆ .
ನಾಡವ ಸಮಾಜ ಒಂದೇ ಎಂದು ನೂರಾರು ವರ್ಷಗಳ ದಾಖಲೆಗಳಿವೆ. ಹಿಂದುಳಿದ ವರ್ಗಗಳ ಆಯೋಗವು ಪ್ರಕಟಿಸಿದ ಪಟ್ಟಿಯಲ್ಲಿ ಬಂಟ ಮತ್ತು ನಾಡವ ಜಾತಿಯನ್ನು ಬೇರೆ ಬೇರೆ ಜಾತಿಯಾಗಿ ತೋರಿಸಿದ್ದಾರೆ. ಸೆಪ್ಟೆಂಬರ್ ೧೭ ರಂದು ಸ್ಪೀಕರ್ ಯು. ಟಿ ಖಾದರ್‌ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಯವರು ಮತ್ತು ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಯವರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಸಮೀಕ್ಷೆಯ ವಿಷಯದಲ್ಲಿ ಮಾಹಿತಿ ನೀಡುವ ಸಭೆ ನಡೆದಿದ್ದು , ಈ ಸಭೆಯಲ್ಲಿ ಬಂಟ ನಾಡವ ಸಮಾಜ ಬಾಂಧವರು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆಗೆ ಬರುವವರಿಗೆ ಯಾವ ರೀತಿ ಮಾಹಿತಿ ನೀಡಬೇಕು ಎಂಬ ಮಾರ್ಗದರ್ಶನವನ್ನು ಪಡೆದುಕೊಂಡಿದ್ದೇವೆ ಎಂದರು .
ಸರಕಾರದ/ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆಗೆ ಬರುವವರ ಮೊಬೈಲ್ ಆಪ್‌ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ, 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-0227) ರಂತೆ BUNT ಎಂದು ನಮೂದಿಸಿ, 11ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು* ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-1026)ರಂತೆ NADAVA ಎಂದು ನಮೂದಿಸುವಂತೆ ಬಂಟರಲ್ಲಿ ಕೇಳಿಕೊಂಡರು .ಇದೇ ರೀತಿಯಾಗಿ 9ನೇ ಕಾಲಂನಲ್ಲಿ ಜಾತಿ* ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A- 1026) ರಂತೆ NADAVA ಎಂದು ನಮೂದಿಸುವ ಸಮಾಜ ಬಾಂಧವರು, 11 ನೇ ಕಾಲಂ ನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು* ಎಂದಿರುವ ಜಾಗದಲ್ಲಿ (A-0227) ರಂತೆ BUNT ಎಂದು ನಮೂದಿಸಬೇಕೆಂದು ಕೋರಿಕೊಂಡರು .
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಾವು ಎ.ಹೇಮನಾಥ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೆಡಿ ಮತ್ತಿತರರು ಉಪಸ್ಥಿತರಿದ್ದರು.