ದ.ಕ. ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕಾ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಉದ್ಯಾನವನದಲ್ಲಿ ಜ.23 ರಿಂದ 26ತನಕ ಪುಷ್ಪ ಮೇಳ ನಡೆಯಲಿದ್ದು ಅದಕ್ಕೆ ನಿನ್ನೆ ಚಾಲನೆ ಸಿಕ್ಕಿತ್ತು .


ಈ ಬಾರಿ ಬಗೆಬಗೆಯ ಹೂವುಗಳಿಂದ ತಯಾರಿಸಲಾದ ವಂದೇ ಭಾರತ್ ರೈಲಿನ ಪ್ರತಿಕೃತಿ ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ.
ಈ ರೈಲು 3 ಬೋಗಿಗಳನ್ನು ಹೊಂದಿದ್ದು, 24 ಅಡಿ ಉದ್ದ ಇದೆ. ರೈಲಿನ ಹಳಿ 30 ಫೀಟ್ ಉದ್ದ ಇದ್ದು, ಐರಿಸ್ ಫರಿಷ್‌ನ ಉಮೇಶ್ ಅವರು ಇದನ್ನು ರೂಪಿಸಿದ್ದಾರೆ. ಇದಕ್ಕೆ ಮೂರು ಕ್ವಿಂಟಾಲ್ ಚೆಂಡು ಹೂವನ್ನು ಬಳಸಲಾಗಿದೆ. ಜಗನ್ನಾಥ್ ಗಂಭೀರ್ ಇದನ್ನು ರೂಪಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಕದ್ರಿ ಉದ್ಯಾನವನವು ನಯನ ಮನೋಹರ ದೃಶ್ಯ ಅಕ್ಷಿಯ ಅದ್ಬುತಕ್ಕೆ ಸಾಕ್ಷಿ ಎಂಬತ್ತಿದೆ. ಹೂವಿನ ವಿಧ ವಿಧದ ಅಲಂಕಾರ ಪುಷ್ಪ ಕಾಶಿಯನ್ನೇ ಧರೆಯಲ್ಲಿ ಸಿಂಗರಿಸಿದ್ದಂತಿದೆ. ಇದು ಭೇಟಿ ನೀಡುವ ಪ್ರವಾಸಿಗರನ್ನು ಹುಬ್ಬೇರಿಸದೇ ಬಿಡದು .


ಫಲಪುಷ್ಪ ಪ್ರದರ್ಶನದ ಅಂಗವಾಗಿ ಕದ್ರಿ ಉದ್ಯಾನವನ ಸಹಸ್ರಾರು ಬಣ್ಣಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ. ಪ್ರದರ್ಶನದ ಅಂಗವಾಗಿ ಸುಮಾರು 15,000 ಸಂಖ್ಯೆಯ 30 ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೋನಿಯಾ, ಟೊರಿನೋ ಇತ್ಯಾದಿ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದೆ. ತರಕಾರಿ ಕೈತೋಟವನ್ನು ರಚಿಸಲಾಗಿದೆ. ಜಿಲ್ಲೆಯ ಮಹತ್ವ, ವಿವಿಧ ಕ್ಷೇತ್ರಗಳ ಗಣ್ಯರ ಬಗ್ಗೆ ಹಣ್ಣು ಮತ್ತು ತರಕಾರಿಗಳಿಂದ ಕಲಾವಿದರು ರಚಿಸಿದ ಕಲಾಕೃತಿಗಳು ಗಮನ ಸೆಳೆಯುತ್ತಿವೆ.ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ .



