ಡಾ. ಬನಾರಿಯವರ ಕನ್ನಡ ಸೇವೆ ಅನನ್ಯ:ಎಡನೀರು ಶ್ರೀ/ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು
ಎಡನೀರು: ಡಾ .ರಮಾನಂದ ಬನಾರಿ ಅವರು ಶ್ರೇಷ್ಠ ಸಾಹಿತಿಗಳು ,ಅರ್ಥಧಾರಿಗಳು. ಅವರ ಸಾಹಿತ್ಯ ಮತ್ತು ತಾಳಮದ್ದಲೆಯ ಅರ್ಥಗಾರಿಕೆ ಅನನ್ಯವಾದುದು. ಕನ್ನಡ ಭಾಷೆ, ಸಾಹಿತ್ಯ ,ಯಕ್ಷಗಾನದ ಮೇಲೆ ತುಂಬಾ ಅಭಿಮಾನ ಉಳ್ಳವರು. ಎಡನೀರು ಮಠದ ಅಭಿಮಾನಿಗಳು. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪರಮಾಪ್ತರಾಗಿದ್ದವರು. ಶ್ರೀಮಠದ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ. ಅವರ ಕೃತಿಯನ್ನು ಬಿಡುಗಡೆಗೊಳಿಸುವುದು ತುಂಬಾ ಸಂತೋಷದ ವಿಚಾರ. ಅವರಿಗೆ ಇನ್ನಷ್ಟು ಕೃತಿಗಳನ್ನು ನೀಡುವ ಸೌಭಾಗ್ಯವನ್ನು ಭಗವಂತನು ಕರುಣಿಸಲಿ ಎಂದು ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಶ್ರೀ ಎಡನೀರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ಅವರ ‘ಬೆಟ್ಟದ ಬುಡದಲ್ಲಿರುವ ಬಂಡಿ’ ಕವನ ಸಂಕಲನವನ್ನು ಅವರು ಬಿಡುಗಡೆ ಮಾಡಿ ಆಶೀರ್ವಚನಗೈದರು .

ಖ್ಯಾತ ಸಾಹಿತಿ ,ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳಾ ಮಾಧವ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅನ್ನದ ಭಾಷೆ, ಬದುಕಿನ ಭಾಷೆಯಾಗಬೇಕು .ಬನಾರಿ ಅವರ ಸಾಂಸ್ಕೃತಿಕ ವಿಲೀನೀಕರಣ ಆಶಯದೊಂದಿಗೆ ಭೌಗೋಳಿಕ ವಿಲೀನೀಕರಣವೂ ಆಗಬೇಕು ಮಹಾಜನ ವರದಿ ಜಾರಿಯಾಗಲು ಎಲ್ಲರೂ ಪ್ರಯತ್ನಿಸಬೇಕು ಎಂದು ಪ್ರಮೀಳಾ ಮಾಧವ್ ಹೇಳಿದರು. ಪ್ರಾಧ್ಯಾಪಕ, ಸಾಹಿತಿ ಡಾ .ಧನಂಜಯ ಕುಂಬಳೆ ಕೃತಿ ಪರಿಚಯ ಮಾಡಿದರು .ಡಾ.ರಮಾನಂದ ಬನಾರಿ ಕೃತಿಕಾರರ ನುಡಿಗಳನ್ನಾಡಿದರು. ಶ್ರೀ ಮಠದ ವತಿಯಿಂದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಡಾ. ರಮಾನಂದ ಬನಾರಿ ಅವರನ್ನು ಶಾಲು ಹೊದೆಸಿ, ಸ್ಮರಣಕೆ ನೀಡಿ ಗೌರವಿಸಿದರು. ಎಡನೀರು ಮಠದ ಪ್ರಬಂಧಕ, ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಅಭಿನಂದನಾ ಭಾಷಣ ಮಾಡಿದರು. ಶ್ರೀಮತಿ ಶಾಂತಾ ಬನಾರಿ ಉಪಸ್ಥಿತರಿದ್ದರು.

ಕಾವ್ಯ ಚಿಂತನ ಕಾರ್ಯಕ್ರಮವನ್ನು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ ಉದ್ಘಾಟಿಸಿದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಡಾ.ಬನಾರಿಯವರ ಕಾವ್ಯಗಳ ಕುರಿತು ಮಾತನಾಡಿದರು.
ಬಳಿಕ ನಡೆದ ‘ ಕವಿ- ಕಾವ್ಯ ಮಿಲನ ‘ದಲ್ಲಿ ಡಾ.ಮಹೇಶ್ವರಿ.ಯು, ಪ್ರಮೀಳಾ ಚುಳ್ಳಿಕ್ಕಾನ, ಲಕ್ಷ್ಮಿ ವಿ.ಭಟ್, ಸತ್ಯವತಿ ಎಸ್ ಭಟ್ ಕೊಳಚಪ್ಪು , ಡಾ. ಗೋವಿಂದ ಭಟ್ ಕೊಳ್ಚಪ್ಪೆ , ಬಾಲಮಧುರ ಕಾನನ , ಜೋತ್ಸ್ನಾ ಕಡಂದೇಳು, ಕವಿತಾ ಕೂಡ್ಲು , ವಿಜಯಲಕ್ಷ್ಮಿ ಶಾನುಭೋಗ್, ಶಶಿಕಲಾ ಟೀಚರ್, ಸ್ನೇಹಲತಾದಿವಾಕರ್, ಸುಭಾಷ್ ಪೆರ್ಲ, ಕವಿತಾ ಕೂಡ್ಲು, ವೆಂಕಟ್ ಭಟ್ ಎಡನೀರು, ಪಾರ್ವತಿ ದಿನೇಶ್ ತಂಬಿಲ ಕೋಡಿ ,ವಿ .ಬಿ ಕುಳಮರ್ವ,ಡಾ. ಕಿಶೋರ್ ಕುಮಾರ್ ರೈ ಕವನವಾಚನ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ, ಕಾಸರಗೋಡು ಕನ್ನಡ ಭವನದ ವಾಮನರಾವ್ ಬೇಕಲ್, ಕಿಶೋರ್ ಬನಾರಿ, ಅಪ್ಪಯ್ಯ ಮಣಿಯಾಣಿ, ಹರೀಶ ಪೆರ್ಲ ಸುಂದರ ಬಾರಡ್ಕ,ಸತೀಶ ಸಾಲಿಯಾನ್ ನೆಲ್ಲಿಕುಂಜೆ ಮೊದಲಾದವರು ಉಪಸ್ಥಿತರಿದ್ದರು.
ವೇದಮೂರ್ತಿ ಶಿವರಾಮ ಭಟ್ ಪ್ರಾರ್ಥನೆ ಹಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯದರ್ಶಿ ಡಾ.ಕಿಶೋರ್ ಕುಮಾರ್ ರೈ ಸ್ವಾಗತಿಸಿ, ಕೋಶಾಧಿಕಾರಿ ವಿಶಾಲಾಕ್ಷ ಪುತ್ರಕಳ ಧನ್ಯವಾದ ಸಮರ್ಪಿಸಿದರು. ದಿವ್ಯಾಗಟ್ಟಿ ಪರಕ್ಕಿಲ ಮತ್ತು ಕವಿತಾ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.

