ಬೆಂಕಿ ಅವಘಡ ತಡೆಗೆ ಅರಣ್ಯ ಇಲಾಖೆ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕೂಡ ಅವರು ಸ್ವತಃ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದ ಅವರು,ಯಾವುದೇ ಸಣ್ಣ ಪುಟ್ಟ ವ್ಯತ್ಯಾಸಗಳು ಕಂಡುಬಂದರೂ ಉದಾಸೀನ ಮನೋಭಾವ ತೋರದೆ ತಕ್ಷಣ ವೈದ್ಯಕೀಯ ಸಲಹೆ ಪಡೆದುಕೊಳ್ಳಲು ತಿಳಿಸಿದರು. ಅರಣ್ಯಗಳಿಗೆ ಅಥವಾ ಇನ್ನಿತರ ಕಡೆಗಳಲ್ಲಿ ಬೆಂಕಿಯನ್ನು ನಂದಿಸುವ ಸಂದರ್ಭಗಳಲ್ಲಿ ಸಿಬ್ಬಂದಿಗಳಿಗೆ ಅವಘಡ ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಮಾತನಾಡಿ, ಪಕೃತಿ,ವನ್ಯ ಜೀವಿಗಳಿಗೆ ಮತ್ತು ಮನುಷ್ಯರಿಗೆ ಬೆಂಕಿಯಿಂದ ಯಾವುದೇ ಹಾನಿಯಾಗದಂತೆ ಇಲಾಖೆಯವರು ಸಕಾಲದಲ್ಲಿ ಸ್ಪಂದಿಸಿ, ಮಾಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಅವರು ತಿಳಿಸಿದರು. ಪ್ರತಿ ಬೇಸಿಗೆ ಕಾಲದಲ್ಲಿ ವರ್ಷವರ್ಷ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ಕ್ರಮವನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸೋಣ ಎಂದು ಅವರು ತಿಳಿಸಿದರು.ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುನಿಲ್ ಜೆ.ಬಿ. ಡಿ.ಸೋಜ, ಅಗ್ನಿಶಾಮಕ ದಳದ ಅಧಿಕಾರಿ ಸತೀಶ್ ಉಪಸ್ಥಿತರಿದ್ದರು.

ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ. ಸ್ವಾಗತಿಸಿ,ಮಂಗಳೂರು ಉಪವಲಯ ಅರಣ್ಯಾಧಿಕಾರಿ ಮೋಹನ್ ಜಿ‌.ಗಂಟೆ ವಂದಿಸಿದರು. ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ. ಅವರು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!