ಮಂಗಳೂರಿನ ಗುಜ್ಜರಕೆರೆಗೆ ಐತಿಹಾಸಿಕಮತ್ತು ಧಾರ್ಮಿಕ ಮಹತ್ವವಿದೆ. ಆದರೆ ಅದರ ನೀರು ಈಗ ಬ್ಯಾಕ್ಟಿರಿಯಾಗಳಿಂದಾಗಿ ಕುಡಿಯಲು ಅಯೋಗ್ಯವಾಗಿದೆ.ನೀರು ಕಲುಷಿತವಾಗಿರುವುದು ಪ್ರಯೋಗಾಲಯ ವರದಿಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಒಂದು ಕಾಲದಲ್ಲಿ ರೋಗರುಜಿನ ಗಳಿದ್ದರೆ ಅದನ್ನು ಗುಣಪಡಿಸುವ ಪವಿತ್ರ ತೀರ್ಥಕೆರೆಯಾಗಿತ್ತು ಗುಜ್ಜರಕೆರೆ. ಅದು ಜನವಸತಿಯ ಒತ್ತಡದಿಂದಾಗಿ ಸದ್ಯ ರೋಗರುಜಿನ ಉಂಟುಮಾಡುವ ಬ್ಯಾಕ್ಟಿರಿಯಾಗಳಿಂದ ಕೂಡಿದೆ.ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದೆ. ಪ್ರಯೋಗಾಲಯದ ವರದಿ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಕೋಟ್ಯಂತರ ರೂಪಾಯಿ ವ್ಯಯಿಸಿ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೆರೆಯನ್ನು ಅಭಿವೃದ್ದಿ ಮಾಡಲಾಗಿತ್ತು. ಸುತ್ತಮುತ್ತ ನೋಡಲು ಮಾತ್ರ ಅಂದವಾಗಿದೆ. ಆದರೆ ಕೆರೆಯ ಒಡಲು ಕಲುಷಿತಗೊಂಡಿದೆ. ಕೆರೆಗೆ ಸೇರುತ್ತಿರುವ ಒಳಚರಂಡಿ ನೀರು ಅದಕ್ಕೆ ಕಾರಣ. ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಪಾಲಿಕೆ, ಸ್ಮಾರ್ಟ್ ಸಿಟಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕೆರೆಯ ನೀರನ್ನು ತೆಗೆದು ಪರೀಕ್ಷೆಗೆ ಒಳಪಡಿಸಲಾದ ನೀರಿನ ಪ್ರತಿ 100 ಮಿಲಿ ಲೀಟರ್‌ನಲ್ಲಿ ಒಟ್ಟು ಕಾಲಿಫಾರ್ಮ್ ಸಂಖ್ಯೆ 1,600ರಷ್ಟು ಕಂಡು ಬಂದಿದೆ. ಫೀಕಲ್ ಕಾಲಿಫಾರ್ಮ್ ಸಂಖ್ಯೆಯೂ 1,600ರಷ್ಟಿದ್ದು, 100 ಎಂ.ಎಲ್. ನೀರಿನಲ್ಲಿ ಈ ಪ್ರಮಾಣದ ಅಂಶ ಕಂಡು ಬರುವುದು ಅಪಾಯಕಾರಿಯಾಗಿದೆ. ನೀರನ್ನು ಕುಡಿಯುವುದು ಅಪಾಯಕಾರಿ ಎಂದು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ.ಮಂಗಳೂರಿನ ನೀರಿನ ಮೂಲಗಳು ನಿರಂತರ ಕಲುಷಿತಗೊಳ್ಳುತ್ತಿರುವುದಕ್ಕೆ ಗುಜ್ಜರಕೆರೆ ಒಂದು ಜ್ವಲಂತ ಉದಾಹರಣೆ.ಏಳು ತಿಂಗಳ ಹಿಂದೆಯೂ ಕೆರೆಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವೇಳೆಯೂ ನೀರು ಕಲುಷಿತಗೊಂಡಿತ್ತು. ಟೋಟಲ್ ಕಾಲಿಫಾರ್ಮ್ ಸಂಖ್ಯೆ 1,600 ಮತ್ತು ಫೀಕಲ್ ಕಾಲಿಫಾರ್ಮ್ ಸಂಖ್ಯೆ 500 ಇತ್ತು. ಈ ಸಂಖ್ಯೆ ಈ ಬಾರಿ ಎರಡು ಪಟ್ಟು ಏರಿಕೆ ಕಂಡಿದೆ.
ಗುಜ್ಜರಕೆರೆ ನೀರನ್ನು ಈ ಹಿಂದೆಯೂ ಹಲವು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರತಿ ಬಾರಿಯೂ ಅಪಾಯ ಕಾರಿ ಬ್ಯಾಕ್ಟಿರಿಯಾಗಳು ಇರುವುದು ಪತ್ತೆಯಾಗಿದೆ. 2014, 2015ರಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1,100ರಷ್ಟು ಬ್ಯಾಕ್ಟಿರಿಯಾ ಪ್ರಮಾಣ ಇತ್ತು. 2016 ಮತ್ತೆ ಪರೀಕ್ಷೆಗೆ ಒಳಪಡಿಸಿ ದಾಗಲೂ ಮತ್ತೆ ಬ್ಯಾಕ್ಷೀಯಾಗಳ ಪ್ರಮಾಣ ಹೆಚ್ಚಾಗಿತ್ತು. ಸಾಮಾನ್ಯವಾಗಿ ನೀರು ಪರೀಕ್ಷೆ ಮಾಡುವಾಗ ಅದರಲ್ಲಿರುವ ಟೋಟಲ್ ಕಾಲಿಫಾರ್ಮ್ (ಒಳ್ಳೆಯ ರೀತಿಯ ಬ್ಯಾಕ್ಟಿರಿಯಾ) ಮತ್ತು ಫೀಕಲ್ ಬ್ಯಾಕ್ಟಿರಿಯಾ ಪರೀಕ್ಷಿಸಲಾಗುತ್ತದೆ.100 ಮಿ.ಮೀ. ನೀರಿನಲ್ಲಿ ಟೋಟಲ್ ಕಾಲಿಫಾರ್ಮ್ ಪ್ರಮಾಣ ಶೂನ್ಯ ಇದ್ದರಷ್ಟೇ ನೀರು ಉತ್ತಮ ಮತ್ತು ಕುಡಿಯಲು ಬಳಕೆ ಮಾಡಬಹುದಾಗಿದೆ. 1-3 ಇದ್ದರೆ ಸಮಾಧಾನಕರ ಮತ್ತು 4-10ರಷ್ಟು ಇದ್ದರೆ ಅಷ್ಟೊಂದು ಉತ್ತಮವಲ್ಲ. 10ಕ್ಕಿಂತ ಮೇಲೆ ಇದ್ದರೆ ಕುಡಿಯಲು ಯೋಗ್ಯವಲ್ಲ. ಫೀಕಲ್ ಕಾಲಿಫಾರ್ಮ್ ಕೂಡ ಶೂನ್ಯ ಪ್ರಮಾಣದಲ್ಲಿದ್ದರೆ ಮಾತ್ರ ಕುಡಿಯಲು ಯೋಗ್ಯವಾದುದು. ಆದರೆ ಈ ಪ್ರಮಾಣ ಸದ್ಯ 1,600ರಷ್ಟಿದೆ.
ಮಂಗಳೂರಿನ ಅತೀ ಪುರಾತನ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿರುವ ಗುಜ್ಜರಕೆರೆಯು ನಾಥ ಪಂಥದ ಋಷಿ ಶ್ರೇಷ್ಠರಾದ ಗುರು ಮಚ್ಚೇಂದ್ರನಾಥರ ಶಿಷ್ಯರಾದ ಗುರು ಗೋರಖನಾಥರ ತಪೋಶಕ್ತಿಯಿಂದ ನಿರ್ಮಿತಗೊಂಡಿದೆ. ಈ ಕೆರೆಗೆ ಸಂಬಂಧ ಪಟ್ಟ ಋಷಿ ಶ್ರೇಷ್ಠರ ಉಲ್ಲೇಖಗಳು ಮಂಗಳೂರಿನ ಪ್ರಧಾನ ದೇವತೆ ಶ್ರೀ ಮಂಗಳಾದೇವಿಯಮ್ಮನವರ ಕ್ಷೇತ್ರದ ಇತಿಹಾಸದಲ್ಲಿ ಉಲ್ಲೇಖವಿದೆ. ಈ ಪವಿತ್ರ ಕೆರೆಯ ಪವಿತ್ರ ತೀರ್ಥದಲ್ಲಿ ನೂರಾರು ವರ್ಷಗಳ ಐತಿಹ್ಯ ಹೊಂದಿರುವ ಸ್ಥಳೀಯ ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ಕ್ಷೇತ್ರದ ದೇವರ ತೀರ್ಥ ಸ್ನಾನವು ವೈಭವದೊಂದಿಗೆ ನಡೆಯುತ್ತಿತ್ತು.