ಮಂಗಳೂರು: ಕರಾವಳಿ ಭಾಗದ ಸಮಸ್ತರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವ ಶರವು ಮಹಾಗಣಪತಿ ದೇವಾಲಯ ಹಾಗೂ ಆಡಳಿತ ಮಂಡಳಿಯ ಪರವಾಗಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಹೊಸ ಸಂವತ್ಸರವನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಶರವು ಮಹಾಗಣಪತಿ ದೇವಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೂರ್ಯೋದಯ–ಸೂರ್ಯಾಸ್ತಗಳ ನಡುವೆ ಕಾಲಚಕ್ರ ನಿರಂತರವಾಗಿ ಮುಂದುವರಿಯುತ್ತಿದ್ದು, ವರ್ಷಗಳ ಬದಲಾವಣೆಯೊಂದಿಗೆ ಋತುಗಳ ಪರಿವರ್ತನೆ ಸಹ ಸಹಜವಾಗಿವೆ ಎಂದು ಹೇಳಿದರು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಸಂವತ್ಸರ ಬದಲಾವಣೆಗೆ ವಿಶೇಷ ಮಹತ್ವವಿದ್ದು, ಯುಗಾದಿ ಹಬ್ಬವು ಹೊಸ ವರ್ಷದ ಆರಂಭದ ಸಂಕೇತವಾಗಿದೆ ಎಂದರು.
ಆಂಗ್ಲ ಕ್ಯಾಲೆಂಡರ್ ಪ್ರಕಾರ ಜನವರಿಯಲ್ಲಿ ಹೊಸ ವರ್ಷವನ್ನು ಆಚರಿಸಿದರೆ, ಭಾರತೀಯ ಪರಂಪರೆಯಲ್ಲಿ ಯುಗಾದಿಯು ಹೊಸ ಸಂವತ್ಸರದ ಪ್ರಾರಂಭವನ್ನು ಸೂಚಿಸುತ್ತದೆ. ಹಳೆಯ ಅನುಭವಗಳನ್ನು ಮುಗಿಸಿ, ಹೊಸ ಚಿಂತನೆ ಹಾಗೂ ನಿರೀಕ್ಷೆಗಳೊಂದಿಗೆ ಜೀವನವನ್ನು ಮುಂದುವರಿಸುವ ಸಂಪ್ರದಾಯವೇ ಯುಗಾದಿಯ ಅರ್ಥ ಎಂದು ಅವರು ತಿಳಿಸಿದರು.
ವಿಶ್ವಾಸು ಸಂವತ್ಸರದಿಂದ ಪರಾಭವ ಸಂವತ್ಸರದತ್ತ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಚಾಂದ್ರಮಾನ ಪ್ರಕಾರ ಯುಗಾದಿ ಹಾಗೂ ಸೌರಮಾನ ಪ್ರಕಾರ ವಿಷು ಹಬ್ಬಗಳನ್ನು ಆಚರಿಸಲಾಗುತ್ತದೆ. ವಿಷು ಸಂದರ್ಭದಲ್ಲಿ ಹೂವು, ಹಣ್ಣು, ಕನಿಗಳನ್ನು ಅಲಂಕರಿಸಿ ಕನ್ನಡಿಯಲ್ಲಿ ಮುಖದರ್ಶನ ಮಾಡುವ ಸಂಪ್ರದಾಯವು ಜೀವನ ವಿಮರ್ಶೆಗೆ ದಾರಿ ತೋರಿಸುತ್ತದೆ ಎಂದರು.
ಇದೇ ವೇಳೆ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವಗಳು ಆರಂಭಗೊಂಡಿವೆ. ಯುಗಾದಿ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿದ್ದು, ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಧ್ವಜಸ್ತಂಭದಲ್ಲಿ ನಂದಿಧ್ವಜವನ್ನು ಏರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ದೇವರ ಸಾನಿಧ್ಯದಲ್ಲಿ ವಿಶೇಷ ಪೂಜೆಗಳು ನೆರವೇರಿಸಲಾಯಿತು. ದಕ್ಷಿಣ ಪರಶುರಾಮ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆ ಧ್ವಜಾರೋಹಣ ಮಾಡುವ ಸಂಪ್ರದಾಯವಿದ್ದು, ಇದು ಉತ್ಸವಗಳ ಆರಂಭದ ಸಂಕೇತವಾಗಿದೆ.
ಮುಂದಿನ ದಿನಗಳಲ್ಲಿ ನಿತ್ಯಕರ್ಮ, ನೈಮಿತ್ತಿಕ ಕರ್ಮ ಸೇರಿದಂತೆ ವಿವಿಧ ಆಚರಣೆಗಳು ನಡೆಯಲಿದ್ದು, ಕೊನೆಯ ದಿನ ರಥೋತ್ಸವ ಹಾಗೂ ಪಟಾಕಿ ಸಿಡಿಸುವ ಕಾರ್ಯಕ್ರಮಗಳೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ತಿಳಿಸಲಾಗಿದೆ.