ಮಂಗಳೂರು:ಭಾರತೀಯ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (ಐಆರ್‌ಸಿಟಿಸಿ)ನಿಂದ ದಿವ್ಯ ದ್ವಾರಕಾಸೋಮನಾಥ ಯಾತ್ರೆ ಎಂಬ ವಿಶೇಷ ಪ್ರವಾಸಿ ರೈಲು ಯಾತ್ರೆ ಹಾಗೂ ಶಿರಡಿಗೆ ವಿಶೇಷ ವಿಮಾನ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಐಆರ್‌ಸಿಟಿಸಿಯ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಪಿ ತಿಳಿಸಿದರು.ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವಿಶೇಷ ರೈಲು ಯಾತ್ರೆಯು ಮೇ 10ರಂದು ಮಂಗಳೂರು ಮೂಲಕ ಹೊರಡಲಿದೆ ಎಂದರು.
10 ದಿನಗಳ ತೀರ್ಥ ಯಾತ್ರೆಯಲ್ಲಿ ಗುಜರಾತ್‌ನ ಪ್ರಮುಖ ಆಧ್ಯಾತ್ಮಿಕ ಸ್ಥಳಗಳು ಹಾಗೂ ಗೋವಾದ ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಾಗುವುದು. ದ್ವಾರಕಾದಲ್ಲಿ ಜ್ಯೋತಿರ್ಲಿಂಗ, ಬೆಟ್ ದ್ವಾರಕಾ, ದ್ವಾರಕಾಧೀಶ ದೇವಾಲಯ ಮತ್ತು ರುಕ್ಮಿಣಿ ದೇವಾಲಯಗಳಿಗೆ ಭೇಟಿ, ಸೋಮನಾಥ ಜ್ಯೋತಿರ್ಲಿಂಗ ಮತ್ತು ಭಲ್ಕಾ ತೀರ್ಥ, ನಿಷ್ಕಳಂಕ ಮಹಾದೇವ ದೇವಾಲಯ ಮತ್ತು ಗಾಂಧಿ ಸ್ಮೃತಿ, ಗೋವಾದಲ್ಲಿ ಐತಿಹಾಸಿಕ ಅಗುವಾಡಾ ಕೋಟೆ, ಬೊಮ್ ಜೀಸಸ್ ಬೆಸಿಲಿಕಾ ಮತ್ತು ಕಲಾಂಗುಟೆ ಮತ್ತು ಕೋಲ್ವಾ ಬೀಚ್‌ಗಳಿಗೆ ಭೇಟಿ ವ್ಯವಸ್ಥೆ ಇದೆ. ಪ್ರಯಾಣಿಕರು ಮಂಗಳೂರು ಮತ್ತು ಉಡುಪಿ ಮೂಲಕ ರೈಲಿಗೆ ಏರಬಹುದು. ಬುಕ್ಕಿಂಗಾಗಿ ಐಆರ್‌ಸಿಟಿಸಿ ಯ ಅಧಿಕೃತ ಪೋರ್ಟಲನ್ನು ಸಂಪರ್ಕಿಸಬಹುದು. ಪ್ರಯಾಣಿಕರಿಗೆ ತಲಾ 28,760 ರೂ. ಪ್ಯಾಕೇಜ್ ದರವಿದ್ದು, 3 ಎಸಿ ರೈಲು ಪ್ರಯಾಣ, ಎಸಿ ಹೊಟೇಲ್ ವಸತಿ, ಎಸಿ ರಸ್ತೆ ಸಾರಿಗೆ, ದಿನಕ್ಕೆ ಮೂರು ಸಸ್ಯಾಹಾರಿ ಊಟ, ವೃತ್ತಿಪರ ಟೂರ್ ಎಸ್ಕಾರ್ಚ್‌ಗಳು, ಸುರಕ್ಷತಾ ಸಿಬ್ಬಂದಿ ಹಾಗೂ ಪ್ರಯಾಣ ವಿಮೆ ಒಳಗೊಂಡಿದೆ ಎಂದು ಅವರು ಹೇಳಿದರು.
ಇದೇ ವೇಳೆ ಶಿರಡಿ ವಿಮಾನ ಪ್ಯಾಕೇಜ್‌ನಡಿ ಶನಿ ಶಿಂಗಣಾಪುರ ದೇವಾಲಯ, ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯ, ತ್ರ್ಯಂಬಕೇಶ್ವರ ಶಿವ ದೇವಾಲಯ, ಪಂಚವಟಿ ಮತ್ತು ಎಲ್ಲೋರಾ ಗುಹೆಗಳನ್ನು ಒಳಗೊಂಡ ಯಾತ್ರೆ ಇರಲಿದೆ. ಎ. 22ರಿಂದ ಎ. 26ರವರೆಗಿನ ಪ್ಯಾಕೇಜ್ ಬೆಲೆ ತಲಾ ಒಬ್ಬರಿಗೆ 28,050 ರೂ.ಗಳಾಗಿರತ್ತುದೆ. ಪ್ಯಾಕೇಜ್‌ನಲ್ಲಿ ವಿಮಾನ ಟಿಕೆಟ್, ಊಟ ಸಹಿತ ವಸತಿ, ಸ್ಥಳೀಯ ಸಾರಿಗೆ, ಟೂರ್ ಕೋ ಅರ್ಡಿನೇಟರ್ ಸೇವೆ ಮತ್ತು ಪ್ರಯಾಣ ವಿಮೆ ಒಳಗೊಂಡಿರುತ್ತದೆ ಎಂದು ಅವರು ವಿವರ ನೀಡಿದರು.
ಗೋಷ್ಟಿಯಲ್ಲಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ನಾಯರ್ , ಸದಸ್ಯರಾದ ನಿಹಾಲ್ ಉಪಸ್ಥಿತರಿದ್ದರು.