ಮಂಗಳೂರು: ‘ಹನಿಟ್ರ್ಯಾಪ್’ ಆರೋಪ – ಸುದೀಪ್ ಸಾವಿನ ಪ್ರಕರಣಕ್ಕೆ ಹೊಸ ತಿರುವು

ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಉದ್ಯಮಿ ಸುದೀಪ್ ರೈ ನೆಲ್ಯಾಡಿ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಮೃತನ ಪತ್ನಿ ಸೌಮ್ಯ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಇನ್ನೊಬ್ಬ ಯುವಕ ಕೂಡ ಆಕೆಯಿಂದ ಮೋಸಕ್ಕೊಳಗಾಗಿದ್ದೇನೆ ಎಂದು ಮುಂದೆ ಬಂದಿದ್ದಾನೆ.ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಪೋಷಕರೊಂದಿಗೆ ಭಾಗವಹಿಸಿದ್ದ ಮುಲ್ಕಿಯ ವೇಣುಗೋಪಾಲ ಶೆಟ್ಟಿ, ಸೌಮ್ಯ ಶೆಟ್ಟಿಯ ಕುರಿತು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದರು.

ವೇಣುಗೋಪಾಲ ಶೆಟ್ಟಿಯ ಹೇಳಿಕೆಯ ಪ್ರಕಾರ, 2024ರ ಜೂನ್‌ನಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಸೌಮ್ಯ, ಬಳಿಕ ಮದುವೆ ಪ್ರಸ್ತಾಪವನ್ನಿಟ್ಟಳು. ಆಕೆ ಹಿಂದಿನಿಂದಲೇ ಡಿವೋರ್ಸ್ ಆಗಿರುವುದನ್ನು ತಿಳಿದಿದ್ದರೂ ಮದುವೆಗೆ ಒಪ್ಪಿಕೊಂಡಿದ್ದಾಗಿ ಅವರು ಹೇಳಿದರು. ಮದುವೆ ದಿನಾಂಕ ನಿಗದಿಯಾಗಿ, ಮಂಟಪ, ಕ್ಯಾಟರಿಂಗ್ ಮತ್ತು ಫೋಟೋಗ್ರಫಿ ಸೇರಿದಂತೆ ಲಕ್ಷಾಂತರ ರೂಪಾಯಿ ಮುಂಗಡ ಹಣವನ್ನು ನೀಡಿದ್ದಾಗಿ ತಿಳಿಸಿದ್ದಾರೆ.

ಮದುವೆಯವರೆಗೆ ಫೋಟೋ ಹಂಚಬೇಡ ಎಂದು ಹೇಳಿದ್ದ ಸೌಮ್ಯ, ಬಳಿಕ ಒಪ್ಪಿಕೊಂಡಳು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿದ ಕೆಲವೇ ಗಂಟೆಗಳಲ್ಲಿ, ಆಕೆಯ ಬಗ್ಗೆ ಎಚ್ಚರಿಕೆ ನೀಡುವ ಹಲವಾರು ಕರೆಗಳು ಬಂದವು. “ಈಕೆಗೆ ಈಗಾಗಲೇ ಎರಡು ಮದುವೆಗಳು ಆಗಿವೆ” ಎಂಬ ಮಾಹಿತಿ ತಿಳಿದ ಬಳಿಕ ಮದುವೆಯನ್ನು ರದ್ದುಪಡಿಸಿದ್ದಾಗಿ ವೇಣುಗೋಪಾಲ ಹೇಳಿದರು.

ಅವರು ಮತ್ತಷ್ಟು ವಿವರಿಸಿ, “ಸೌಮ್ಯ ತನ್ನ ಹಿಂದಿನ ಸಂಬಂಧಗಳ ಬಗ್ಗೆ ಸುಳ್ಳು ಹೇಳಿದ್ದಳು. ಡಿವೋರ್ಸ್ ಪ್ರಕರಣದಲ್ಲಿ ಸಹಾಯ ಮಾಡಿದ ವ್ಯಕ್ತಿಯನ್ನೇ ಮದುವೆಯಾಗಿ ಒಂದೂವರೆ ವರ್ಷ ಜೊತೆಗಿದ್ದರೂ, ನನಗೆ ‘ಅವನು ಕೇವಲ ಸ್ನೇಹಿತ’ ಎಂದು ತಪ್ಪು ಮಾಹಿತಿ ನೀಡಿದ್ದಳು” ಎಂದು ಆರೋಪಿಸಿದರು.ಮದುವೆ ರದ್ದಾದ ಬಳಿಕವೂ ಸೌಮ್ಯ ಕಿರುಕುಳ ನೀಡುತ್ತಿದ್ದಳು. ಕಾರ್ಕಳದಲ್ಲಿ ಅಕ್ಕನ ಮನೆಯಲ್ಲಿ ಇದ್ದಾಗ ನಿತ್ಯ ಜಗಳ ಮಾಡುತ್ತಿದ್ದಳು. ತನ್ನ ತಾಯಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲೂ ಗಲಾಟೆ ಮಾಡಿದ್ದಾಳೆ ಎಂದು ಅವರು ಹೇಳಿದರು. ಗಲಾಟೆ ತೀವ್ರಗೊಂಡಾಗ ಪೊಲೀಸರು ಕೂಡ ಮಧ್ಯಪ್ರವೇಶಿಸಿದ್ದರು.

“ಆಕೆಯ ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳದಿಂದ ಪಾರಾಗಲು ವಕೀಲರ ಸಲಹೆಯಂತೆ ಕೆಲವು ಕಾಲ ಮುಂಬೈನಲ್ಲಿ ಅಡಗಿಕೊಳ್ಳಬೇಕಾಯಿತು. ಆಕೆಯ ಬಲೆಯಿಂದ ತಪ್ಪಿಸಿಕೊಳ್ಳಲು ಬಹಳ ಸಂಕಷ್ಟ ಅನುಭವಿಸಿದ್ದೇನೆ” ಎಂದು ವೇಣುಗೋಪಾಲ ಶೆಟ್ಟಿ ಹತಾಶೆ ವ್ಯಕ್ತಪಡಿಸಿದರು.ಇದೀಗ ಸುದೀಪ್ ಸಾವಿನ ಹಿನ್ನೆಲೆ, “ಈಕೆಯ ಬಲೆಗೆ ಇನ್ನೂ ಎಷ್ಟು ಮಂದಿ ಸಿಲುಕಿದ್ದಾರೆ ಗೊತ್ತಿಲ್ಲ. ಸುದೀಪ್ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಹನಿಟ್ರ್ಯಾಪ್ ಜಾಲ ಬಯಲಾಗಬೇಕು” ಎಂದು ಅವರು ಆಗ್ರಹಿಸಿದರು.ಈ ಪ್ರಕರಣ ಇದೀಗ ಮಂಗಳೂರಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸತ್ಯಾಂಶ ಬಹಿರಂಗವಾಗಲು ಸಾರ್ವಜನಿಕರು ಕಾಯುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!