ಮಂಗಳೂರು ನಗರದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದು, ಅಗತ್ಯ ಕಚ್ಚಾ ವಸ್ತುಗಳ ಕೊರತೆ ಹಾಗೂ ಕುಶಲಕರ್ಮಿ ಕಾರ್ಮಿಕರ ಅಭಾವವನ್ನು ತಕ್ಷಣ ಪರಿಹರಿಸಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್, ಇಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಕೆನರಾ ಬಿಲ್ಡರ್ಸ್ ಅಸೋಸಿಯೇಷನ್ ಜಂಟಿಯಾಗಿ ಆಗ್ರಹಿಸಿವೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಮಂಗಳೂರು ಅಧ್ಯಕ್ಷ ಮಹಾಬಲ ಶೆಟ್ಟಿ, ಕೆಂಪುಕಲ್ಲು, ಮರಳು ಹಾಗೂ ಎಂ-ಸ್ಯಾಂಡ್ ಕೊರತೆಯಿಂದ ಕಳೆದ ಕೆಲವು ವರ್ಷಗಳಿಂದ ನಿರ್ಮಾಣ ಕ್ಷೇತ್ರ ತತ್ತರಿಸುತ್ತಿದೆ ಎಂದು ತಿಳಿಸಿದರು.
ಉತ್ತರ ಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳು, ಮತಪಟ್ಟಿ ಪರಿಷ್ಕರಣೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ಊರಿಗೆ ತೆರಳಿದ ಕಾರ್ಮಿಕರು ಮರಳಿ ಬಾರದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಉತ್ತರ ಭಾರತದ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರಲ್ಲಿ ಶೇ.90ರಷ್ಟು ಮಂದಿ ಹಬ್ಬ ಹಾಗೂ ಇತರ ಕಾರಣಗಳಿಂದ ಊರಿಗೆ ತೆರಳಿ ವಾಪಸ್ಸಾಗಿಲ್ಲ ಎಂದು ಮಾಹಿತಿ ನೀಡಿದರು.
ಪ್ಲಾಸ್ಟರಿಂಗ್, ಬಾರ್‌ಬೆಂಡಿಂಗ್ ಸೇರಿದಂತೆ ಪ್ರಮುಖ ಕುಶಲಕರ್ಮಿ ಕೆಲಸಗಳಿಗೆ ಈ ಕಾರ್ಮಿಕರ ಮೇಲೆಯೇ ಕ್ಷೇತ್ರ ಅವಲಂಬಿತವಾಗಿದೆ. ಜೊತೆಗೆ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದ ಕೆಂಪುಕಲ್ಲಿನ ಪೂರೈಕೆ ಬೇಡಿಕೆಗೆ ಅನುಗುಣವಾಗಿಲ್ಲ. ನಾನ್-ಸಿಆರ್‌ಝಡ್ ಪ್ರದೇಶಗಳಲ್ಲಿ ದೊರೆಯುವ ಮರಳಿನ ಗುಣಮಟ್ಟ ಸಮರ್ಪಕವಾಗಿಲ್ಲದಿದ್ದು, ಎಂ-ಸ್ಯಾಂಡ್ ಕೊರತೆಯೂ ಹೆಚ್ಚುವರಿ ತೊಂದರೆ ಉಂಟುಮಾಡುತ್ತಿದೆ ಎಂದು ಹೇಳಿದರು.
ಇಂಜಿನಿಯರ್ಸ್ ಅಸೋಸಿಯೇಷನ್ ಪ್ರತಿನಿಧಿ ಉಜ್ವಲ್ ಡಿಸೋಜಾ ಮಾತನಾಡಿ, ಈ ಪರಿಸ್ಥಿತಿಯಿಂದ ಗುತ್ತಿಗೆದಾರರು ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದೆ ಕಟ್ಟಡ ಮಾಲೀಕರೊಂದಿಗೆ ಕಾನೂನು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತಕ್ಷಣ ಕಚ್ಚಾ ವಸ್ತುಗಳ ಪೂರೈಕೆಯನ್ನು ಸುಧಾರಿಸಿ, ಕಾರ್ಮಿಕರ ಕೊರತೆಯನ್ನು ನಿವಾರಿಸಲು ಸ್ಥಳೀಯ ಕಾರ್ಮಿಕರಿಗೆ ಉತ್ತೇಜನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಂಘಗಳು ಆಗ್ರಹಿಸಿವೆ.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ದಿನಕರ್, ಕಾರ್ಯದರ್ಶಿ ಅಶೋಕ್ ಕುಳಾಯಿ, ಸತೀಶ್ ಜೋಗಿ, ಅರುಣ್ ರಾಜ್ ಹಾಗೂ ಕೆನರಾ ಬಿಲ್ಡರ್ಸ್ ಅಸೋಸಿಯೇಷನ್‌ನ ವಿನಾಯಕ ಪೈ ಸೇರಿದಂತೆ ಇತರರು ಉಪಸ್ಥಿತರಿದ್ದರು.