ಮನುಷ್ಯ ಹುಟ್ಟಿನಿಂದಲೇ ಒಂದಲ್ಲ ಒಂದು ರೀತಿಯ ಪ್ರತಿಭೆಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುತ್ತಾನೆ.ಇಂತಹ ಪ್ರತಿಭೆಗಳನ್ನು ಎಳೆಯ ಪ್ರಾಯದಲ್ಲಿಯೇ ಗುರುತಿಸಿ, ಪ್ರೋತ್ಸಾಹಿಸಿ ಅದನ್ನು ಹೆಮ್ಮರವಾಗಿ ಬೆಳೆಸುವಂತೆ ಮಕ್ಕಳ ಹೆತ್ತವರು ಸೇರಿದಂತೆ ಸಮಾಜದ ಪ್ರತಿಯೊಬ್ಬ ನಾಗರಿಕರು ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಸಂತ ಅಲೋಶಿಯಸ್ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾದ ರೆ.ಫಾ.ಜಾನ್ಸನ್ ಪಿಂಟೋ ಎಸ್ ಜೆ ಯವರು ಅಭಿಪ್ರಾಯಪಟ್ಟರು.
ಅವರು ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆಗಳ ಜಂಟಿ ಆಶ್ರಯದಲ್ಲಿ ಸಂತ ಅಲೋಶಿಯಸ್ ಹೈಸ್ಕೂಲ್ ನ ಸಹಕಾರದೊಂದಿಗೆ 6 ದಿನಗಳ ಕಾಲ ನಡೆಯಲಿರುವ ಚಿಣ್ಣರ ಕಲರವ – 2026 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ, ಈ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಯುವಜನ ನಾಯಕರಾದ ಮೆರಿಲ್ ರೇಗೋ, ಮಾಜಿ ವಿದ್ಯಾರ್ಥಿ ನಾಯಕರಾದ ಮೆಲ್ವಿನ್ ಪಾಯಸ್ ರವರು ಮಾತನಾಡಿ, ಚಿಣ್ಣರ ಕಲರವದಂತಹ ಮಕ್ಕಳ ಬೇಸಿಗೆ ಶಿಬಿರಗಳು ಹೆಚ್ಚೆಚ್ಚು ನಡೆಯುವ ಮೂಲಕ ಮಕ್ಕಳಲ್ಲಿಯೂ ಸಮಾಜಮುಖಿ ಚಿಂತನೆಗಳನ್ನು ಹಾಗೂ ಮಾನವೀಯ ಗುಣಗಳನ್ನು ಬೆಳೆಸಲು ಸಾಧ್ಯವಾಗಬೇಕು ಎಂದು ಹೇಳಿದರು
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಮಾತನಾಡಿ,ಇಂದಿನ ಮಕ್ಕಳೇ ಭವ್ಯ ಭಾರತದ ಭವಿಷ್ಯವಾಗಿದ್ದು, ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಸಮಾಜದ ಸ್ವಾಸ್ಥ್ಯವನ್ನು ಕೂಡ ಕಾಪಾಡಬೇಕಿದೆ.ಹಾಗೂ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು
ವೇದಿಕೆಯಲ್ಲಿ ಚಿಣ್ಣರ ಚಾವಡಿ ಅಧ್ಯಕ್ಷರಾದ ಪೂರ್ವಿ ಶೆಟ್ಟಿ, ಶಿಬಿರದ ನಿರ್ದೇಶಕರಾದ ಪ್ರವೀಣ್ ವಿಸ್ಮಯ ಬಜಾಲ್, ಶಿಬಿರದ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್,ವೇದಿಕೆಯ ಪ್ರಮುಖರಾದ ಡೋಲ್ಫಿ ಡಿಸೋಜ,ಫ್ಲೇವಿಕ್ರಾಸ್ತ ಅತ್ತಾವರ, ಅಸುಂತ ಡಿಸೋಜ, ಗ್ರೆಟ್ಟಾ ಟೀಚರ್ ಮುಂತಾದವರು ಉಪಸ್ಥಿತರಿದ್ದರು.