ಮಂಗಳೂರು: ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಸೆ.28ರಿಂದ 30ರವರೆಗೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ. ಇದರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಸೆ.26ರಂದು ನಾಲ್ಕನೇ ಶನಿವಾರ ಹಾಗೂ ಸೆ.27ರಂದು ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ, ಸತತ ಮೂರು ದಿನಗಳ ಮುಷ್ಕರದಿಂದಾಗಿ ಒಟ್ಟು ಐದು ದಿನಗಳ ಕಾಲ ಬ್ಯಾಂಕಿಂಗ್ ಕಾರ್ಯಾಚರಣೆಗೆ ಅಡಚಣೆ ಎದುರಾಗುವ ಸಾಧ್ಯತೆಯಿದೆ.

ಎಲ್ಲ ಶನಿವಾರಗಳನ್ನು ರಜಾದಿನವನ್ನಾಗಿ ಘೋಷಿಸಿ ವಾರದಲ್ಲಿ ಐದು ದಿನಗಳ ಕೆಲಸದ ಪದ್ಧತಿ ಜಾರಿಗೊಳಿಸುವುದು, ನಿವೃತ್ತ ನೌಕರರಿಗೆ ಏಕರೂಪದ ತುಟ್ಟಿ ಭತ್ಯೆ ಮತ್ತು ಪಿಂಚಣಿ ನವೀಕರಣ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿರುವ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆಗೆ ಮರಳಲು ಅವಕಾಶ ಕಲ್ಪಿಸುವುದು ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ನಿಯಮಗಳಲ್ಲಿನ ತಿದ್ದುಪಡಿಗಳನ್ನು ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಒಕ್ಕೂಟ ಮುಂದಿಟ್ಟಿದೆ.

ಸೆ.11ರಂದು ಮುಷ್ಕರ ನಡೆಸಿದ್ದ ಒಕ್ಕೂಟ, ಬೇಡಿಕೆಗಳು ಈಡೇರದಿದ್ದರೆ ಅ.26ರಿಂದ ನಿರಂತರ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಬ್ಯಾಂಕ್ ರಜೆಗಳ ಬೆನ್ನಲ್ಲೇ ಮೂರು ದಿನಗಳ ಮುಷ್ಕರ ಹಮ್ಮಿಕೊಂಡಿರುವುದರಿಂದ ಗ್ರಾಹಕರ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

