ಮಂಗಳೂರು:ಹಿಜಾಬ್ ಧರಿಸುವುದು ಹೊಸ ಪದ್ಧತಿಯಲ್ಲ. ಅದು ಮುಸ್ಲಿಂ ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಯ ಭಾಗವಾಗಿದ್ದು, ಅದಕ್ಕೆ ರಾಜಕೀಯ ಬಣ್ಣ ಬಳೆಯುತ್ತಿರುವುದು ಬಿಜೆಪಿಯ ಸಣ್ಣತನ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಐವನ್ ಡಿ’ಸೋಜ ಕಟುವಾಗಿ ರಾಜ್ಯ ಬಿಜೆಪಿ ಸರಕಾರವನ್ನು ಟೀಕಿಸಿದರು .
ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸುವ ಪದ್ಧತಿ ಬಾಲ್ಯದಿಂದಲೇ ನಡೆದುಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯವಾಗಿದೆ. ಸಿಖ್ ಸಮುದಾಯದವರು ಪೇಟ ಧರಿಸುವಂತೆ, ಮುಸ್ಲಿಂ ಮಹಿಳೆಯರೂ ತಮ್ಮ ಧರ್ಮದ ಸಂಸ್ಕೃತಿಯ ಭಾಗವಾಗಿ ಹಿಜಾಬ್ ಧರಿಸುತ್ತಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು .
ಪ್ರತಿಯೊಂದು ವಿಚಾರವನ್ನೂ ಧರ್ಮದ ಆಧಾರದ ಮೇಲೆ ವಿಭಜಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಹಿಜಾಬ್ ವಿಚಾರವನ್ನೂ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಹಿಜಾಬ್ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಅವಕಾಶ ನೀಡಿರುವುದನ್ನು ಸ್ವಾಗತಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹಿಜಾಬ್ ನಿಷೇಧದ ತೀರ್ಮಾನವನ್ನು ಹಿಂಪಡೆಯಲಾಗಿದೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಸರ್ಕಾರ ತನ್ನ ವಾಗ್ದಾನವನ್ನು ಈಡೇರಿಸಿದೆ ಎಂದು ಹೇಳಿದರು.
ಶಾಲೆಗಳಲ್ಲಿ ಯೂನಿಫಾರ್ಮ್ ಧರಿಸುವ ಸಂದರ್ಭದಲ್ಲಿ ಹಿಜಾಬ್ ಧರಿಸುವುದರಿಂದ ಶಿಕ್ಷಣ ವ್ಯವಸ್ಥೆಗೆ ಯಾವುದೇ ಹಾನಿಯಾಗುವುದಿಲ್ಲ. ಇದರಿಂದ ಯಾರಿಗೂ ನಷ್ಟ ಉಂಟಾಗುವುದಿಲ್ಲ. ಹಿಜಾಬ್ ವಿಚಾರದಲ್ಲಿ ಬಿಜೆಪಿಯ ವಿರೋಧವು ಸಮಾಜವನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸುವ ರಾಜಕೀಯ ಕಾರ್ಯಕ್ರಮವೇ ಹೊರತು, ಇದರಲ್ಲಿ ಯಾವುದೇ ನೈಜ ಅಂಶ ಇಲ್ಲ ಎಂದು ಟೀಕಿಸಿದರು.
ಎಬಿವಿಪಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಶಾಲೆಗೆ ಬರುವುದಾಗಿ ಸವಾಲು ಹಾಕಿದ ಕುರಿತು ಮಾತನಾಡಿದ ಅವರು , ರಾಜ್ಯದ ಮುಖ್ಯಮಂತ್ರಿ ಈಗಾಗಲೇ ಯಾವುದೇ ರೀತಿಯ ಶಾಲುಗಳಿಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಖಚಿತವಾಗಿ ಕೈಗೊಳ್ಳಲಿದೆ ಎಂದರು .