ಮಂಗಳೂರು:ಅಧಿಕ ಮಾಸದ ಪವಿತ್ರ ಸಂದರ್ಭವನ್ನು ಅಂಗವಾಗಿ ಮಾಡಿಕೊಂಡು ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಶರದ್ ಸ್ವಾಮಿ ಶಿವೂರಕರ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಅನಂತ ಶ್ರೀ ವಿಭೂಷಿತ ಪ್ರೋತ್ರಿಯ ಬ್ರಹ್ಮನಿಷ್ಠ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿಸದ್ಗುರು ಬ್ರಹ್ಮಾನಂದ ಸರಸ್ವತಿಜೀ ಮಹಾರಾಜ್ (ಶ್ರೀ ಪಂಚದಶನಾಮ ಜುನಾ ಅಖಾಡಾ) ಅವರ ದಿವ್ಯ ಸಾನಿಧ್ಯದಲ್ಲಿ “ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ” ಕಾರ್ಯಕ್ರಮವು ಜೂನ್ 7ರಿಂದ 13ರವರೆಗೆ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂನಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ ಎಂದು ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಮಹಾರಾಜರು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಚೈತನ್ಯ ಸದ್ಗುರು ಶರದ್ ಸ್ವಾಮಿ ಶಿವೂರಕರ ಬಹುಉದ್ದೇಶಿತ ಸಂಸ್ಥೆ, ಪಂಡರಪುರ ಇದರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಈ ಭಕ್ತಿಪರ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
“ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣದೊಂದಿಗೆ ನಿರಂತರ ಅಖಂಡ ಹರಿನಾಮ ಸಂಕೀರ್ತನೆ ಈ ಸಪ್ತಾಹದ ವಿಶೇಷ ಆಕರ್ಷಣೆಯಾಗಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಜ್ಞಾನೇಶ್ವರಿ ಪಾರಾಯಣ, ಭಜನೆ, ಅಖಂಡ ಹರಿನಾಮ ಸಂಕೀರ್ತನೆ, ಧಾರ್ಮಿಕ ಉಪನ್ಯಾಸಗಳು ಹಾಗೂ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿವೆ. ವಿವಿಧ ಭಾಗಗಳಿಂದ ಭಕ್ತರು, ಭಜನಾ ಮಂಡಳಿಗಳು, ಆಧ್ಯಾತ್ಮಿಕ ಸಾಧಕರು ಹಾಗೂ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅಧಿಕ ಮಾಸದ ಈ ವಿಶೇಷ ಧಾರ್ಮಿಕ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಆಧ್ಯಾತ್ಮಿಕ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮನ ಗೌಡ , ನಾರಾಯಣ , ವಿನೋದ್ ಕುಮಾರ್ , ರಮೇಶ್ ಅರಕೇರಿ , ಆರ್ ಟಿ ಪಾಟೀಲ್ , ಕೆಂಜರೆಡ್ಡಿ ಉಪಸ್ಥಿತರಿದ್ದರು .