ಮೇ.26ಕ್ಕೆ ಹಕ್ಕುಪತ್ರ ವಿತರಣೆ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪುಣಚ ಗ್ರಾಮದ ಪರಿಶಿಷ್ಟ ಪಂಗಡದ ಮೂರು ಕುಟುಂಬಗಳಿಗೆ ಹಕ್ಕುಪತ್ರಕ್ಕಾಗಿ ನಾಲ್ಕು ದಿನಗಳಿಂದ ಬಂಟ್ವಾಳ ಮಿನಿವಿಧಾನ ಸೌಧದ ಕಚೇರಿಯ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತ್ರತ್ವದಲ್ಲಿ ಮಾತುಕತೆ ನಡೆಸಿ ಕೊನೆಗೊಳಿಸಲಾಯಿತು.

ಮೇ. 26 ರಂದು ಪೆರ್ನೆಯ ಗ್ರಾ.ಪಂ.ನಲ್ಲಿ ಮೂರು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಭರವಸೆಯನ್ನು ತಹಶಿಲ್ದಾರ್ ಮಂಜುನಾಥ್ ಅವರು ಬಂಟ್ವಾಳ ಶಾಸಕರಿಗೆ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ಕುಟುಂಬಗಳು ಇವರ ಮಾತಿಗೆ ಗೌರವ ನೀಡಿ ಪ್ರತಿಭಟನೆಯನ್ನು ಕೊನೆಗೊಳಿಸಿದರು.
ಮೇ. 18 ರಿಂದ ಮೇ.19 ರವರೆಗೆ ಅಹೋರಾತ್ರಿವರೆಗೆ ಹಕ್ಕುಪತ್ರ ಕೊಡಿ ಎಂಬ ಹೋರಾಟದಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ನೇತ್ರತ್ವದಲ್ಲಿ ಪುತ್ತೂರು ಬಿಜೆಪಿ ಮಂಡಲ ಹಾಗೂ ಬಂಟ್ವಾಳ ಮಂಡಲ ಬಿಜೆಪಿ ಸಾಥ್ ನೀಡಿ ಪ್ರತಿಭಟನೆಯನ್ನು ಮುಂದುವರಿಸಿದ್ದರು.
ಮೇ. 20 ರಂದು ಬುಧವಾರ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕೂಡ ಪ್ರತಿಭಟನೆಯ ಜೊತೆ ಸೇರಿಕೊಂಡು ದಲಿತ ಕುಟುಂಬದ ಜೊತೆ ನಿಲ್ಲುವುದಾಗಿ ಭರವಸೆ ನೀಡಿದ್ದರು.

ನಾಲ್ಕನೇ ದಿನವಾದ ಮೇ. 21 ರಂದು ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ‌, ತಹಶಿಲ್ದಾರ್ ಮಂಜುನಾಥ್ ಅವರ ಜೊತೆ ಸುಮಾರು ಅರ್ಧ ತಾಸುಗಳ ಕಾಲ ಮಾತುಕತೆ ನಡೆಸಿದರು.
ಮೇ. 26 ರಂದು ಸೋಮವಾರ ಪೆರ್ನೆ ಗ್ರಾ.ಪಂ.ನಲ್ಲಿ ಹಕ್ಕುಪತ್ರ ನೀಡುವುದಾಗಿ ಪುತ್ತೂರು ಶಾಸಕರು ತಿಳಿಸಿದ್ದಾರೆ ಎಂಬ ಮಾತನ್ನು ತಹಶಿಲ್ದಾರ್ ಬಂಟ್ವಾಳ ಶಾಸಕರಿಗೆ ಹೇಳಿದರು.ಬಳಿಕ ತಹಶಿಲ್ದಾರ್ ನೀಡಿದ ಭರವಸೆಯನ್ನು ಶಾಸಕರು ಪ್ರತಿಭಟನಾಕಾರರಲ್ಲಿ ತಿಳಿಸಿದಾಗ ಮಾತಿಗೆ ಒಪ್ಪಿಕೊಂಡ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ಮೇ.26 ಕ್ಕೆ ಹಕ್ಕುಪತ್ರ: ಶಾಸಕ ರಾಜೇಶ್ ನಾಯ್ಕ್
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಪುಣಚ ಗ್ರಾಮದ 3ನೇ ವಾರ್ಡ್ ನ ದೇವಿನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಮೂರು ಮನೆಗೆ 94. ಸಿ ಕೊಡುವ ಬಗ್ಗೆ ಸ್ವಲ್ಪ ಗೊಂದಲವಾಗಿತ್ತು. ತಹಶೀಲ್ದಾರರಿಗೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಕೊಡುವ ಹಂತದಲ್ಲಿರುವಾಗ ಒಂದು ಪ್ರೋಟೋಕಾಲ್ ಪ್ರಕಾರ, ಯಾವುದೇ ಶಾಸಕರು ಜನಪ್ರತಿನಿಧಿಗಳ ಮುಖಾಂತರ ಕೊಡಬೇಕು ಎಂಬ ಕಾರಣಕ್ಕೆ ಸ್ವಲ್ಪ ಗೊಂದಲವಾಗಿತ್ತು.

ಕಳೆದ ಮೂರು ದಿವಸದಿಂದ ಪರಿಶಿಷ್ಟ ಪಂಗಡದ ಸದಸ್ಯರು ಧರಣಿ ಕುಳಿತಾಗ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಇಡೀ ಬಿಜೆಪಿ ತಂಡ ಸಪೋರ್ಟ್ ಮಾಡಿದ್ದಾರೆ.ಇವತ್ತು ನಾನು ತಹಶೀಲ್ದಾರ್ ಹತ್ತಿರ ಈ ಬಗ್ಗೆ ಚರ್ಚೆ ಮಾಡಿದಾಗ ಹಕ್ಕುಪತ್ರ ಸಿಗುವುದು ರೆಡಿಯಾಗಿದೆ. ಈಗಾಗಲೇ ಅವರು ಶಾಸಕರೊಂದಿಗೆ ಮಾತನಾಡಿದ್ದು, ಮೇ.26 ಕ್ಕೆ ಪೆರ್ನೆ ಗ್ರಾಮ ಪಂಚಾಯತ್ ನಲ್ಲಿ ಕೊಡುವುದು ಅಂತ ತೀರ್ಮಾನಿಸಲಾಗಿದೆ.
ಖಂಡಿತವಾಗಿಯೂ ಮೇ.26 ರಂದು ಹಕ್ಕು ಪತ್ರ ಸಿಗುತ್ತದೆ ಅನ್ನೊ ಭರವಸೆ ನಮಗೆಲ್ಲರಿಗೂ ಇದೆ ಎಂದು ತಿಳಿಸಿದರು.

ಪ್ರೋಟೋಕಾಲ್ ಪ್ರಕಾರ ನೀಡುತ್ತೇವೆ: ಮಂಜುನಾಥ್ .

ತಹಶೀಲ್ದಾರ್ ಮಂಜುನಾಥ್ ಅವರು ಮಾತನಾಡಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಹಕ್ಕು ಪತ್ರ ವಿತರಣೆ ಪ್ರೋಟೋಕಾಲ್ ಪ್ರಕಾರ ಜನಪ್ರತಿನಿಧಿಗಳು ಅಥವಾ ಸ್ಥಳೀಯ ಶಾಸಕರು ಕೊಡಬೇಕು ಎನ್ನುವ ಕಾರಣಕ್ಕೆ ಗೊಂದಲವಾಯಿತು. ಮೇ.26ನೇ ತಾರೀಕು ಪೆರ್ನೆ ಗ್ರಾಮ ಪಂಚಾಯಿತಿನಲ್ಲಿ ಕಾರ್ಯಕ್ರಮ ಇದೆ. ಅಂದು ನಾನು ಹಕ್ಕು ಪತ್ರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬಂಟ್ವಾಳ ಹಾಗೂ ಪುತ್ತೂರು ಮಂಡಲದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!