ಮಂಗಳೂರು: “ಅಭಿವೃದ್ಧಿ ಕಾಮಗಾರಿಗಳಿಗೆ ಮುತುವರ್ಜಿ ವಹಿಸಿ ಕೋಟಿ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರ. ಇದೀಗ ನಿರ್ಮಾಣ ಪೂರ್ಣಗೊಂಡ ಕಟ್ಟಡಗಳಿಗೆ ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡುವ ಭಾಗ್ಯ ಮಾತ್ರ ಕಾಂಗ್ರೆಸ್ ಸರ್ಕಾರಕ್ಕೆ ಸಿಕ್ಕಿದೆ” ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಿಹಿಲ್ಸ್ನ ನೂತನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಕಟ್ಟಡ ಉದ್ಘಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದಿನ ಬಿಜೆಪಿ ಸರ್ಕಾರದ ಅಭಿವೃದ್ಧಿ ಬದ್ಧತೆಯೇ ಈ ಯೋಜನೆ ಸಾಕಾರಗೊಳ್ಳಲು ಕಾರಣವಾಗಿದೆ ಎಂದು ಹೇಳಿದರು.
“ಮಂಗಳೂರಿನಲ್ಲೇ ಹೈಕೋರ್ಟ್ ಸಂಚಾರಿ ಪೀಠ ಆರಂಭವಾಗಲಿ”
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಕುರಿತು ಮಾತನಾಡಿದ ಶಾಸಕ ಕಾಮತ್, ಮಂಗಳೂರಿನ ವಕೀಲರ ಸಂಘ ಹಲವು ವರ್ಷಗಳಿಂದ ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ಕರಾವಳಿ ಭಾಗದ ಜನರಿಗೆ ಶೀಘ್ರ ನ್ಯಾಯ ದೊರಕುವ ನಿಟ್ಟಿನಲ್ಲಿ ಮಂಗಳೂರಿನಲ್ಲೇ ಸಂಚಾರಿ ಪೀಠ ಆರಂಭವಾಗಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರಿಗೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ವಿಧಾನಸಭೆಯಲ್ಲಿಯೂ ಹಲವು ಬಾರಿ ಈ ಬೇಡಿಕೆಯನ್ನು ಪ್ರಸ್ತಾಪಿಸಿದ್ದೇನೆ ಎಂದರು.
ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಸಕಾರಾತ್ಮಕ ಸ್ಪಂದನೆ ನೀಡಿರುವುದು ಸ್ವಾಗತಾರ್ಹ. ಆದರೆ ಮಂಗಳೂರಿನ ಬದಲು ಬೇರೆ ಜಿಲ್ಲೆಯಲ್ಲಿ ಸಂಚಾರಿ ಪೀಠ ಆರಂಭಿಸಬೇಕು ಎನ್ನುವ ಮಾತುಗಳು ಕೇಳಿಬರುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
“ಮಳೆಗಾಲ ಸಿದ್ಧತೆಯಲ್ಲಿ ಪಾಲಿಕೆ ವೈಫಲ್ಯ”
ಮಳೆಗಾಲ ಸಮೀಪಿಸುತ್ತಿದ್ದರೂ ಪಾಲಿಕೆ ವ್ಯಾಪ್ತಿಯ ರಾಜಕಾಲುವೆ ಮತ್ತು ಚರಂಡಿಗಳ ಹೂಳೆತ್ತುವ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಶಾಸಕ ಕಾಮತ್ ಆರೋಪಿಸಿದರು.
ಪ್ರತಿ ವಾರ್ಡ್ಗೆ ಗ್ಯಾಂಗ್ಮೆನ್ ನೇಮಕ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಸೂಚಿಸಿದ್ದರೂ ಪಾಲಿಕೆ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗ್ಯಾಂಗ್ಮೆನ್ ನೇಮಕಾತಿಗೆ ಇನ್ನೂ ಟೆಂಡರ್ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಜೆಸಿಬಿ ಹೋಗಲಾಗದ ಪ್ರದೇಶಗಳಲ್ಲಿ ಹೂಳೆತ್ತುವ ಕಾಮಗಾರಿ ಕೈಬಿಡಲಾಗುತ್ತಿದೆ. ಇದರಿಂದ ಮಳೆಯ ಸಂದರ್ಭದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು.
“ಕೆಜಿಟಿಟಿಐ ಕಟ್ಟಡ ಬಿಜೆಪಿ ಸರ್ಕಾರದ ಕೊಡುಗೆ”
ಕದ್ರಿಹಿಲ್ಸ್ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ₹20.85 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಹೊಸ ಕಟ್ಟಡ ಬಿಜೆಪಿ ಸರ್ಕಾರದ ಅವಧಿಯ ಯೋಜನೆ ಎಂದು ಕಾಮತ್ ಹೇಳಿದರು.
2019ರಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದ್ದು, 2021ರಲ್ಲಿ ₹15.23 ಕೋಟಿ ಹಾಗೂ 2022ರಲ್ಲಿ ಪರಿಷ್ಕೃತ ಆದೇಶದ ಮೂಲಕ ₹20.85 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು ಎಂದು ವಿವರಿಸಿದರು.
2022ರ ಡಿಸೆಂಬರ್ 16ರಂದು ಅಂದಿನ ಸಚಿವ ಅಶ್ವಥ್ ನಾರಾಯಣ ಶಂಕುಸ್ಥಾಪನೆ ನೆರವೇರಿಸಿದ್ದು, ಕಾಮಗಾರಿಯ ಪ್ರತಿಯೊಂದು ಹಂತದಲ್ಲೂ ವಿಶೇಷ ಗಮನ ಹರಿಸಲಾಗಿತ್ತು ಎಂದು ತಿಳಿಸಿದರು.
“ಈಗ ಕಟ್ಟಡ ಸಂಪೂರ್ಣವಾಗಿ ನಿರ್ಮಾಣಗೊಂಡಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಉದ್ಘಾಟನೆ ಮಾಡುವ ಅವಕಾಶ ದೊರೆತಿದೆ” ಎಂದು ವ್ಯಂಗ್ಯವಾಡಿದರು.
ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಮನವಿ
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ ಶಾಸಕ ಕಾಮತ್, ಯುವಜನರ ಭವಿಷ್ಯ ದೃಷ್ಟಿಯಿಂದ ಬಿಜೆಪಿ ಸರ್ಕಾರ ಈ ಯೋಜನೆಗೆ ಆದ್ಯತೆ ನೀಡಿತ್ತು ಎಂದರು. ಈಗಿನ ಸರ್ಕಾರವು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉಪಕರಣಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಶೀಘ್ರ ಒದಗಿಸಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತ ಆರೋಪ
ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ವೃದ್ಧಾಪ್ಯ ವೇತನ, ವಿಧವಾ ವೇತನ, ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ ಹಾಗೂ ನಿವೃತ್ತ ನೌಕರರ ಪಿಂಚಣಿ ಸೇರಿದಂತೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳ ಹಣ ಬಿಡುಗಡೆ ಆಗಿಲ್ಲ ಎಂದು ಶಾಸಕ ಕಾಮತ್ ಆರೋಪಿಸಿದರು.
“ಈ ಪಿಂಚಣಿಗಳನ್ನೇ ನಂಬಿಕೊಂಡು ಬದುಕುತ್ತಿರುವ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ಸಾಧನಾ ಸಮಾವೇಶಗಳಲ್ಲಿ ತೊಡಗಿಕೊಂಡಿದೆ” ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ಖಜಾನೆ ಖಾಲಿಯಾಗಿದ್ದು, ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ ಅವರು, ತಕ್ಷಣವೇ ಬಾಕಿ ಉಳಿದಿರುವ ಎಲ್ಲಾ ಪಿಂಚಣಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ ಎಂ. ರವಿಶಂಕರ್ ಮಿಜಾರ್, ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೆಲ್, ಸುರೇಖಾ ಎಂ.ಎಸ್. ಹಾಗೂ ನಿತಿನ್ ಕುಮಾರ್ ಉಪಸ್ಥಿತರಿದ್ದರು.