ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು : ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು : ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.ಕರಾವಳಿ ಭಾಗದ ಜನರಿಗೆ ಶೀಘ್ರಗತಿಯಲ್ಲಿ ನ್ಯಾಯದಾನ ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂಬ ಮಂಗಳೂರು ವಕೀಲರ ಸಂಘದ ಹಲವು ವರ್ಷಗಳ ಬೇಡಿಕೆಯು ಎಲ್ಲಾ ರೀತಿಯಿಂದಲೂ ನ್ಯಾಯಯುತವಾಗಿದೆ. ಅಂತೆಯೇ ಇಡೀ ಮಂಗಳೂರಿನ ಜನತೆಯ ಪರವಾಗಿ ನನ್ನ ಆಗ್ರಹವೂ ಅದೇ ಆಗಿದ್ದು, ಅದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಕಾಮತ್ ಮಂಗಳೂರಿನಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಆರಂಭದಿಂದಲೂ ರಾಜಕೀಯ ರಹಿತವಾಗಿ ನಡೆದುಕೊಂಡು ಬಂದ ಈ ಹೋರಾಟದ ಪ್ರತೀ ಹೆಜ್ಜೆಯಲ್ಲೂ ವಕೀಲರ ಸಂಘದ ಜೊತೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ರವರಿಗೆ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಗಿದೆ, ಮಾತ್ರವಲ್ಲದೇ, ವೈಯಕ್ತಿಕವಾಗಿ ಹಾಗೂ ಅಧಿವೇಶನದಲ್ಲೂ ಸರ್ಕಾರವನ್ನು ಹಲವು ಬಾರಿ ಆಗ್ರಹಿಸಿದ್ದೇನೆ ಎಂದವರು ಹೋರಾಟದ ಹೆಜ್ಜೆಗಳನ್ನು ನೆನಪಿಸಿದರು.

ಈ ನಡುವೆ ಮುಖ್ಯಮಂತ್ರಿಗಳು ನಮ್ಮೆಲ್ಲರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತಾರ್ಹವಾಗಿದ್ದು, ಇಂತಹ ಸಂದರ್ಭದಲ್ಲಿ, ಒಂದಷ್ಟು ಜನರು ಮಂಗಳೂರಿನ ಬದಲು, ಬೇರೆ ಜಿಲ್ಲೆಯಲ್ಲಿ ಸಂಚಾರಿ ಪೀಠವನ್ನು ಆರಂಭಿಸಿ ಎಂದು ಆಗ್ರಹಿಸುತ್ತಿರುವುದು ಸರಿಯಲ್ಲ, ಮತ್ತು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಮಂಗಳೂರು ಎಂಬುದು ಬಸ್ಸು, ರೈಲು, ವಿಮಾನ ಹೀಗೆ ಎಲ್ಲಾ ರೀತಿಯಲ್ಲೂ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ. ಹಳೆಯ ಜಿಲ್ಲಾಧಿಕಾರಿ ಕಚೇರಿಯ ಆವರಣವು ಎಲ್ಲಾ ರೀತಿಯಲ್ಲಿ ಸೂಕ್ತವಾಗಿದ್ದು, ಇಲ್ಲಿರುವ ಮೂಲಭೂತ ಸೌಕರ್ಯಗಳು ಸಹ ಹೈಕೋರ್ಟ್ ಸಂಚಾರಿ ಪೀಠಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ ಈ ವಿಷಯದಲ್ಲಿ ಸ್ಪೀಕರ್, ಸಂಸದರು, ವಿಧಾನಪರಿಷತ್ ಸದಸ್ಯರು, ಎಲ್ಲಾ ರಾಜಕೀಯ ಪಕ್ಷಗಳು, ಎಲ್ಲಾ ನಾಯಕರುಗಳು, ಹಿರಿಯರು ಮುಖಂಡರು ಸೇರಿಕೊಂಡು, ಒಕ್ಕೊರಲಿನಿಂದ ನಮ್ಮ ಬೇಡಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ಸರ್ಕಾರದ ಮುಂದಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!