ಮಂಗಳೂರು: ಕರಾವಳಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಹಾಗೂ ಅದ್ದೂರಿ ಸಭಾಭವನಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲ್ಯಾಂಡ್ ಲಿಂಕ್ಸ್ ಸಂಸ್ಥೆಯ 45 ವರ್ಷಗಳ ಯಶಸ್ವಿ ಪಯಣದ ಸವಿನೆನಪಾಗಿ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆಯಾಗಿ ನಾಲ್ಕು ಭವ್ಯ ಸಭಾಂಗಣಗಳನ್ನು ನಿರ್ಮಿಸಲಾಗಿದ್ದು, ಮೇ 23ರಂದು ಅವುಗಳನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು ಎಂದರು.
ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಲಿಂಕ್ಸ್ ಕಳೆದ 45 ವರ್ಷಗಳಿಂದ ಕರಾವಳಿ ಭಾಗದಲ್ಲಿ ವಿಶ್ವಾಸಾರ್ಹ ಹಾಗೂ ಯಶಸ್ವಿ ಉದ್ಯಮದ ಮೂಲಕ ಲಕ್ಷಾಂತರ ಜನರ ನಂಬಿಕೆಯನ್ನು ಗಳಿಸಿದೆ. ಅದರ ಭಾಗವಾಗಿ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸಭಾಭವನಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ಸಮಾರಂಭಕ್ಕೆ ಆಂಧ್ರ ಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಮುಖ್ಯ ಅತಿಥಿಯಾಗಿ ಆಗಮಿಸಿ ನಾಲ್ಕೂ ಸಭಾಂಗಣಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಹಲವು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಏಕಕಾಲಕ್ಕೆ ನಾಲ್ಕು ಸಭಾಭವನಗಳ ಉದ್ಘಾಟನೆ ನಡೆಯುತ್ತಿರುವುದು ಕರಾವಳಿ ಭಾಗದ ಇತಿಹಾಸದಲ್ಲೇ ಅಪರೂಪದ ಬೆಳವಣಿಗೆಯಾಗಿದ್ದು, ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಕೃಷ್ಣ ಜೆ. ಪಾಲೆಮಾರ್ ಹೇಳಿದರು.