ಮಂಗಳೂರು:ವೈಜ್ಞಾನಿಕ ಕನಿಷ್ಠ ಕೂಲಿ ನಿಗದಿ, ಕಾರ್ಮಿಕ ಕಾನೂನುಗಳ ರಕ್ಷಣೆ, ರಾಜ್ಯ ಸರ್ಕಾರ ಪ್ರಕಟಿಸಿರುವ ಕನಿಷ್ಠ ಕೂಲಿಯ ಕಟ್ಟುನಿಟ್ಟಿನ ಜಾರಿ ಹಾಗೂ ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ಸೇರಿಸುವಂತೆ ಆಗ್ರಹಿಸಿ ಸಿಐಟಿಯು (CITU) ಕರೆ ನೀಡಿದ್ದ ರಾಜ್ಯವ್ಯಾಪಿ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ 300ಕ್ಕೂ ಅಧಿಕ ಕಾರ್ಮಿಕರು ಭಾಗವಹಿಸಿ, ಕಾರ್ಮಿಕ ಕಾನೂನುಗಳು ಹಾಗೂ ಕನಿಷ್ಠ ಕೂಲಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ನಾಗುರಿ ಜಂಕ್ಷನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕಾರ್ಮಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದೇಶದ ಕಾರ್ಮಿಕ ವರ್ಗದ ಹೋರಾಟದ ಫಲವಾಗಿ ರೂಪುಗೊಂಡಿದ್ದ ಕಾರ್ಮಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಏಕಾಏಕಿ ರದ್ದುಗೊಳಿಸಿ ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸಿರುವುದು ಕಾರ್ಮಿಕ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.
ಈ ಸಂಹಿತೆಗಳು ಕಾರ್ಮಿಕರ ಹಿತಾಸಕ್ತಿಗಿಂತ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದ್ದು, ಕಾರ್ಮಿಕರನ್ನು ನವಗುಲಾಮಗಿರಿಯತ್ತ ದೂಡುವ ಪ್ರಯತ್ನವಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ಆರಂಭಿಸಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಲಾಯಿತು. ನಂತರ ಸಿಐಟಿಯು ನಿಯೋಗವೊಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಸಲ್ಲಿಸಬೇಕಾದ ಮನವಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿತು.
ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್,ಸದಾಶಿವ ದಾಸ್,DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಅಭಿಷೇಕ್ ಬೆಳ್ತಂಗಡಿ,SFI ಜಿಲ್ಲಾ ಕಾರ್ಯದರ್ಶಿ ವಿನುಷ ರಮಣರವರು ಭಾಗವಹಿಸಿದ್ದರು
ಪ್ರತಿಭಟನೆಯಲ್ಲಿ CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ , ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ವಸಂತ ಆಚಾರಿ , CITU ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರೋಹಿದಾಸ್, ರವಿಚಂದ್ರ ಕೊಂಚಾಡಿ, ನೋಣಯ್ಯ ಗೌಡ,ವಸಂತಿ ಕುಪ್ಪೆಪದವು,ರಾಧಾ ಮೂಡುಬಿದಿರೆ,ಈಶ್ವರಿ ಪದ್ಮುಂಜ, ಜಯಂತ ನಾಯಕ್,ಪ್ರಮೋದಿನಿ, ದಿನೇಶ್ ಶೆಟ್ಟಿ, ಜಯಲಕ್ಷ್ಮಿ, ಭಾರತಿ,ಭವಾನಿ,ಹೊನ್ನಯ್ಯ ಅಮೀನ್,ಯಶೋಧಾ,ಗಿರಿಜಾ, ವಾರಿಜಾ,ಲಕ್ಷ್ಮಿ ಮೂಡುಬಿದಿರೆ, ಪದ್ಮಾವತಿ, ಜಯಶ್ರೀ,ಸಂತೋಷ್ ಆರ್ ಎಸ್, ಮುಝಾಫರ್ ಅಹಮದ್, ರಫೀಕ್ ಹರೇಕಳ, ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.