ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ತಯಾರಿಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಘಟನೆ ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕದಲ್ಲಿ ನಡೆದಿದೆ.
ಅಕ್ರಮ ಗೋವಧೆ ನಡೆಯುತ್ತಿರುವ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಕಡಬ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ದಾಳಿ ನಡೆಸಿ ಮೂವರನ್ನು ಹಿಡಿದು ವಿಚಾರಿಸಲಾಯಿತು. ಬಂಧಿತರನ್ನು ಕೆ ಅಬ್ದುಲ್ ರಫೀಕ್(37), ಅದ್ರಾಮ ಮಂತೂರು(41) ಮತ್ತು ಅಬ್ದುಲ್ ಖಾದರ್ ಪಣೆಮಜಲು (57) ಎಂದು ಗುರುತಿಸಲಾಗಿದೆ.
ವಿಚಾರಣೆಯ ವೇಳೆ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿರುವುದು ದೃಢಪಟ್ಟಿದ್ದು, ಸ್ಥಳದಲ್ಲಿದ್ದ ಜಾನುವಾರು ಮಾಂಸ, ಇತರೆ ಸೊತ್ತುಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 36/2026, ಕಲಂ 4,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.