ಮಂಗಳೂರು, ಜೂನ್ 4: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ಈ ಬೆಳವಣಿಗೆ ಮುಂದುವರಿದರೆ ಜನಸಾಮಾನ್ಯರ ಮೇಲೂ ಅದರ ನೇರ ಪರಿಣಾಮ ಬೀಳಲಿದೆ ಎಂದು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಶಿವರುದ್ರಪ್ಪ ಎನ್.ಬಿ. ಎಚ್ಚರಿಸಿದರು.
ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶ್ವವಿದ್ಯಾಲಯ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನೆ, ತರಬೇತಿ ಮತ್ತು ವಿಸ್ತರಣಾ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ರೂಪಾಯಿಯ ಸಮಸ್ಯೆ ಮತ್ತು ಅದರ ಸಮಕಾಲೀನ ಮೌಲ್ಯವರ್ಧನೆ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಒಂದು ಡಾಲರ್‌ಗೆ ಕೇವಲ ಮೂರು ರೂಪಾಯಿ ಮೌಲ್ಯವಿತ್ತು. 2013ರಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಬಲಪಡಿಸುವ ಭರವಸೆಗಳನ್ನು ನೀಡಲಾಗಿತ್ತು. ಆದರೆ ಕಳೆದ 12 ವರ್ಷಗಳಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ಗಣನೀಯವಾಗಿ ಕುಸಿದಿದ್ದು, ಒಂದು ಡಾಲರ್‌ಗೆ 95.1 ರೂಪಾಯಿ ತಲುಪಿದೆ. ಆಗಿನ 54.78 ರೂಪಾಯಿ ಮೌಲ್ಯವನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಅಧ್ಯಯನ ಮತ್ತು ಆರ್ಥಿಕ ಚಿಂತನೆಗಳು ಪ್ರಮುಖ ಆಧಾರವಾಗಿದ್ದವು. ಅವರ ವಿಚಾರಧಾರೆಯ ಪ್ರಭಾವದಿಂದಲೇ 1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು.
ಅಂಬೇಡ್ಕರ್ ಅವರನ್ನು ಒಂದು ಕಾಲದಲ್ಲಿ ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಇಂದಿಗೂ ಅವರು ಜಾರಿಗೆ ತಂದ ಮೀಸಲಾತಿ ವ್ಯವಸ್ಥೆಯ ವಿರುದ್ಧ ಅಪಪ್ರಚಾರಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಗೌತಮ ಬುದ್ಧರಂತೆ ಸಂಶೋಧನಾ ಮನೋಭಾವ ಬೆಳೆಸಿಕೊಂಡು ಅಧ್ಯಯನ ನಡೆಸಬೇಕು. ದೇಶದ ಆರ್ಥಿಕ ಸ್ಥಿರತೆ ಮತ್ತು ರೂಪಾಯಿ ಮೌಲ್ಯ ಕುಸಿತದಂತಹ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಂತ್ ನಾಯಕ್ ವಹಿಸಿದ್ದರು. ವಿಭಾಗದ ಹಣಕಾಸು ಅಧಿಕಾರಿ ಪ್ರೊ. ಪಂಚಲಿಂಗಸ್ವಾಮಿ ಉಪಸ್ಥಿತರಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ರಾಜು ಕೃಷ್ಣ ಚಲನ್ನವರ್ ಸ್ವಾಗತಿಸಿದರು. ಡಾ. ಅಬೂಬಕರ್ ಸಿದ್ದೀಕ್ ವಂದಿಸಿದರು. ಡಾ. ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.