ಫಿಟ್ ಇಂಡಿಯಾ ಅಭಿಯಾನಕ್ಕೆ ಬಲ: ವಿಶ್ವ ಸೈಕಲ್ ದಿನದಂದು ಮಂಗಳೂರಿನಲ್ಲಿ ನೂರಾರು ಸೈಕ್ಲಿಸ್ಟ್‌ಗಳ ಭಾಗವಹಿಸುವಿಕೆ

ಮಂಗಳೂರು, ಜೂನ್ 7: ವಿಶ್ವ ಸೈಕಲ್ ದಿನಾಚರಣೆ-2026ರ ಅಂಗವಾಗಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇರಾ ಯುವ ಭಾರತ (MY Bharat), ದಕ್ಷಿಣ ಕನ್ನಡ ವತಿಯಿಂದ “ಹಸಿರು ಭವಿಷ್ಯಕ್ಕಾಗಿ ಸೈಕ್ಲಿಂಗ್” ಎಂಬ ಧ್ಯೇಯವಾಕ್ಯದೊಂದಿಗೆ ಭವ್ಯ “ಸಂಡೇಸ್ ಆನ್ ಸೈಕಲ್” ಸೈಕಲ್ ಜಾಥಾವನ್ನು ಭಾನುವಾರ ಯಶಸ್ವಿಯಾಗಿ ಆಯೋಜಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ, ಎನ್‌ಎಸ್‌ಎಸ್ ಮಂಗಳೂರು ವಿಶ್ವವಿದ್ಯಾಲಯ, ಫ್ರೀಜಿಂಗ್ ಸನ್, ಮಂಗಳೂರು ಸೈಕ್ಲಿಂಗ್ ಕ್ಲಬ್, ಸುರತ್ಕಲ್ ಬೀಚ್ ರನ್ನರ್ಸ್ ಹಾಗೂ ವಿ ಆರ್ ಸೈಕ್ಲಿಂಗ್ ಕ್ಲಬ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು ಆರೋಗ್ಯಕರ ಜೀವನಶೈಲಿ, ದೈಹಿಕ ಕ್ಷಮತೆ, ಪರಿಸರ ಸಂರಕ್ಷಣೆ ಹಾಗೂ ಯುವ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿತ್ತು.

ಬೆಳಿಗ್ಗೆ 7 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಿಂದ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೈಕ್ಲಿಂಗ್ ಆರೋಗ್ಯ ಕಾಪಾಡುವ ಅತ್ಯುತ್ತಮ ಸಾಧನವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇರಾ ಯುವ ಭಾರತ (MY Bharat) ದಕ್ಷಿಣ ಕನ್ನಡದ ಉಪನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ. ಮಾತನಾಡಿ, ಯುವಜನರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು. ವಿವಿಧ ಸಂಘ-ಸಂಸ್ಥೆಗಳ ಸಹಕಾರವನ್ನು ಅಭಿನಂದಿಸಿದ ಅವರು, ಆರೋಗ್ಯವಂತ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಸೈಕ್ಲಿಂಗ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಇಂತಹ ಆರೋಗ್ಯ ಮತ್ತು ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ MY Bharat ಪ್ರತಿನಿಧಿ ಜಗದೀಶ್ ಕೆ., ಎನ್‌ಎಸ್‌ಎಸ್ ಮಂಗಳೂರು ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜಕ ಶೇಷಪ್ಪ ಅಮೀನ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಫ್ರೀಜಿಂಗ್ ಸನ್ ಪ್ರತಿನಿಧಿಗಳಾದ ಪರಾಂಜಲಿ ಹಾಗೂ ಮಾರಿಯಾ, ಖ್ಯಾತ ಚಲನಚಿತ್ರ ನಟ ದಿನೇಶ್ ಅತ್ತಾವರ, ಮಂಗಳೂರು ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಅನಿಲ್ ಶೆಟ್, ವಿ ಆರ್ ಸೈಕ್ಲಿಂಗ್ ಕ್ಲಬ್‌ನ ಹರ್ನಿಶ್ ಹಾಗೂ ರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್ ಹಾರ್ದಿಕ್ ರೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸೈಕಲ್ ಜಾಥಾದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದರು. ಮಂಗಳಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ ಕಾರ್ ಸ್ಟ್ರೀಟ್, ಕ್ಲಾಕ್ ಟವರ್, ಪಿವಿಎಸ್ ಸರ್ಕಲ್, ಲಾಲ್‌ಬಾಗ್ ಹಾಗೂ ಲೇಡಿ ಹಿಲ್ ಮಾರ್ಗವಾಗಿ ಸಂಚರಿಸಿ ಮತ್ತೆ ಮಂಗಳಾ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು. ಮಾರ್ಗದುದ್ದಕ್ಕೂ ಭಾಗವಹಿಸಿದವರು ‘ಫಿಟ್ ಇಂಡಿಯಾ’ ಅಭಿಯಾನ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಜಾಥಾ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಆರೋಗ್ಯ, ಫಿಟ್ನೆಸ್ ಹಾಗೂ ಹಸಿರು ಜೀವನಶೈಲಿಯ ಮಹತ್ವದ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಗಣ್ಯರ ಸಮ್ಮುಖದಲ್ಲಿ ಪ್ರಮಾಣಪತ್ರಗಳು ಹಾಗೂ ಪದಕಗಳನ್ನು ವಿತರಿಸಿ ಗೌರವಿಸಲಾಯಿತು.

ವಿಶ್ವ ಸೈಕಲ್ ದಿನಾಚರಣೆ-2026ರ ಅಂಗವಾಗಿ ಆಯೋಜಿಸಲಾದ ‘ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮವು ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಯುವಜನರ ಸಬಲೀಕರಣದ ಸಂದೇಶವನ್ನು ಜನಸಾಮಾನ್ಯರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!