ಮಂಗಳೂರು, ನಗರದಲ್ಲಿ ಸಂಚರಿಸುವ ಮೀನಿನ ಲಾರಿಗಳಿಂದ ತ್ಯಾಜ್ಯ ನೀರು ಸೋರಿಕೆಯಾಗುತ್ತಿರುವುದರಿಂದ ದುರ್ವಾಸನೆ ಉಂಟಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕುರಿತು ಬಂದಿರುವ ನಿರಂತರ ದೂರುಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮೀನಿನ ಕಾರ್ಖಾನೆ ಮಾಲೀಕರು ಹಾಗೂ ಉದ್ಯಮಿಗಳ ಸಭೆ ನಡೆಸಿತು.
ಸಭೆಯಲ್ಲಿ ಮಾತನಾಡಿದ ಉದ್ಯಮಿಗಳು, ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕಗಳಲ್ಲಿ ಮೀನಿನ ಲಾರಿಗಳ ತ್ಯಾಜ್ಯ ನೀರು ವಿಸರ್ಜನೆಗಾಗಿ ಸೆಪ್ಟಿಕ್ ಟ್ಯಾಂಕ್‌ಗಳನ್ನು ನಿರ್ಮಿಸಿರುವ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಹಾಗೂ ಮುಲ್ಕಿ ಪ್ರದೇಶಗಳಲ್ಲಿಯೂ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಇದರಿಂದ ರಸ್ತೆಯಲ್ಲಿ ನೀರು ಸೋರಿಕೆಯನ್ನು ತಡೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಕುರಿತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಒತ್ತಾಯಿಸಿದರು.
ಇದೇ ವೇಳೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಹ್ಯಾಮಿಲ್ಟನ್ ವೃತ್ತದ ವೈಜ್ಞಾನಿಕ ಪುನರ್ ವಿನ್ಯಾಸ ಕುರಿತಂತೆ ಎನ್‌ಐಟಿಕೆ ಸಲ್ಲಿಸಿರುವ ವರದಿ ಹಾಗೂ ನಕ್ಷೆಯನ್ನು ಪರಿಶೀಲಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸಂಚಾರ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಸೂಚನೆ ನೀಡಿದರು.
ಪಂಪ್‌ವೆಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಬಸ್ ನಿಲ್ದಾಣ ಯೋಜನೆ ಕುರಿತು ಚರ್ಚಿಸಿದ ಜಿಲ್ಲಾಧಿಕಾರಿಗಳು, ಮೀಸಲಿರಿಸಿರುವ 7 ಎಕರೆ ಜಾಗದಲ್ಲಿ 2 ಎಕರೆ ಪ್ರದೇಶವನ್ನು ಕೆಎಸ್‌ಆರ್‌ಟಿಸಿಗೆ ಹಾಗೂ ಉಳಿದ 5 ಎಕರೆ ಪ್ರದೇಶದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ನಗರ ಸಂಚಾರ ವ್ಯವಸ್ಥೆಗೆ ಮಹತ್ವದ ಈ ಯೋಜನೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ಹಾಗೂ ಸೆಂಟ್ರಲ್ ಮಾರ್ಕೆಟ್ ಪ್ರದೇಶಗಳಲ್ಲಿ ಫುಟ್‌ಪಾತ್ ಅತಿಕ್ರಮಿಸಿ ನಡೆಯುತ್ತಿರುವ ಬೀದಿ ವ್ಯಾಪಾರದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾಹಿತಿ ನೀಡಿದರು. ಪಾಲಿಕೆಯ ಗುರುತಿನ ಚೀಟಿ ಹೊಂದಿರುವವರನ್ನು ಹೊರತುಪಡಿಸಿ ಇತರರಿಗೆ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂಗಳಾದೇವಿಯಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ನಿಲ್ದಾಣದಿಂದ ಆ ಭಾಗದ ಬಸ್‌ಗಳ ಕಾರ್ಯಾಚರಣೆ ಆರಂಭಿಸುವ ಕುರಿತು ಬಸ್ ಮಾಲೀಕರೊಂದಿಗೆ ಸಭೆ ನಡೆಸಲಾಗಿದ್ದು, ಶೀಘ್ರದಲ್ಲೇ ನಿಲ್ದಾಣ ಕಾರ್ಯಾಚರಣೆಗೆ ಬರಲಿದೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ, ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವ ಸ್ಥಳಗಳ ಕುರಿತು ಪೊಲೀಸ್ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ವರದಿ ಸಲ್ಲಿಸಿದ್ದು, ಕೂಡಲೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.