ಮುಂಗಾರು ಅಬ್ಬರಕ್ಕೆ ಮುನ್ನೆಚ್ಚರಿಕೆ: ರಸ್ತೆ ಡಿವೈಡರ್‌ಗಳ ಫ್ಲೆಕ್ಸ್, ಬ್ಯಾನರ್‌ಗಳನ್ನು ತುರ್ತಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಜೂ.11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಡಿವೈಡರ್‌ಗಳಿಗೆ ಅಳವಡಿಸಲಾಗಿರುವ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್‌ಗಳನ್ನು ತುರ್ತಾಗಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬಿರುಗಾಳಿ ಹಾಗೂ ಮಳೆಯ ಪರಿಣಾಮದಿಂದ ರಸ್ತೆ ಬದಿಗಳು ಮತ್ತು ಮಧ್ಯದ ಡಿವೈಡರ್‌ಗಳಲ್ಲಿ ಅಳವಡಿಸಲಾದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ಕಳಚಿ ವಾಹನಗಳು ಮತ್ತು ಪಾದಚಾರಿಗಳ ಮೇಲೆ ಬೀಳುವ ಸಾಧ್ಯತೆ ಇರುವುದರಿಂದ ಅಪಘಾತ ಹಾಗೂ ಜೀವಹಾನಿ ಸಂಭವಿಸುವ ಆತಂಕ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಲ್ಲಿ, ವಿಶೇಷವಾಗಿ ಡಿವೈಡರ್‌ಗಳಿಗೆ ಅಳವಡಿಸಲಾಗಿರುವ ಅಪಾಯಕಾರಿ ಮತ್ತು ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್‌ಗಳನ್ನು ಮೊದಲ ಆದ್ಯತೆಯಲ್ಲಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.

ಕೈಗೊಂಡ ಕ್ರಮಗಳ ಕುರಿತು ಛಾಯಾಚಿತ್ರ ಸಹಿತ ವರದಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಡಿವೈಡರ್‌ಗಳಿಗೆ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅನಧಿಕೃತವಾಗಿ ಅಳವಡಿಸಲಾದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಅಥವಾ ವಿಳಂಬ ಕಂಡುಬಂದಲ್ಲಿ ಅಥವಾ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಂದ ಅಪಘಾತ ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಇತರ ನಿಯಮಗಳ ಅಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!