ಮತದಾರರ ಪಟ್ಟಿಯ ಎಸ್‌ಐಆರ್‌ನಲ್ಲಿ ಮಹಿಳಾ ಸ್ನೇಹಿ ಕ್ರಮ ಅನುಸರಿಸಿ: ಜಿಲ್ಲಾಡಳಿತಕ್ಕೆ ಜನವಾದಿ ಮಹಿಳಾ ಸಂಘಟನೆ ಮನವಿ

ಮಂಗಳೂರು, ಜೂನ್ 13: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮಹಿಳಾ ಸ್ನೇಹಿ ಕ್ರಮಗಳನ್ನು ಅನುಸರಿಸಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಶುದ್ಧೀಕರಣದ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ರಾಜ್ಯಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಂಘಟನೆ ತಿಳಿಸಿದೆ.

ಬಿಹಾರ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ ಅನುಭವವನ್ನು ಉಲ್ಲೇಖಿಸಿದ ಸಂಘಟನೆ, 2002ರ ಮತದಾರರ ಪಟ್ಟಿಯನ್ನು ಮೂಲ ದಾಖಲೆಯಾಗಿ ಪರಿಗಣಿಸುವುದು, ಹೆಸರುಗಳಲ್ಲಿನ ಇನಿಷಿಯಲ್ ಮತ್ತು ಸ್ಪೆಲ್ಲಿಂಗ್ ವ್ಯತ್ಯಾಸ, ವಿವಾಹಿತ ಮಹಿಳೆಯರ ದಾಖಲೆಗಳ ಸಮಸ್ಯೆ ಹಾಗೂ ಬಾಲ್ಯ ವಿವಾಹದಿಂದ ಉಂಟಾಗುವ ವಯೋಮಾನದ ವ್ಯತ್ಯಾಸಗಳಂತಹ ಅಂಶಗಳು ಮಹಿಳೆಯರಿಗೆ ತೊಂದರೆ ಉಂಟುಮಾಡುತ್ತಿವೆ ಎಂದು ಮನವಿಯಲ್ಲಿ ತಿಳಿಸಿದೆ.

ಜೂನ್ 30ರಿಂದ ಜಿಲ್ಲೆಯಲ್ಲಿ ಆರಂಭವಾಗಲಿರುವ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಅಸಂಗತ ಮಾಹಿತಿ ಮತ್ತು ತಾಂತ್ರಿಕ ವ್ಯತ್ಯಾಸಗಳನ್ನು ಮಹಿಳೆಯರ ವಿರುದ್ಧ ಬಳಸಬಾರದು. ಅಗತ್ಯ ದಾಖಲೆಗಳನ್ನು ಪಡೆಯಲು ನೆರವು ನೀಡುವುದರ ಜೊತೆಗೆ ವಲಸೆ ಕಾರ್ಮಿಕರು, ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಿತರು ಹಾಗೂ ಟ್ರಾನ್ಸ್‌ಜೆಂಡರ್ ಸಮುದಾಯದ ಮತದಾನದ ಹಕ್ಕು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಅಗತ್ಯ ದಾಖಲೆಗಳನ್ನು ಒದಗಿಸಲು ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ರೂಪಿಸಬೇಕು. ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ರೀತಿಯ ಪಕ್ಷಪಾತ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಹಲವು ರಾಜ್ಯಗಳಲ್ಲಿ ಬಿ.ಎಲ್.ಒ.ಗಳ ಮೇಲೆ ಹೆಚ್ಚಿದ ಕೆಲಸದ ಒತ್ತಡ ಹಾಗೂ ರಾಜಕೀಯ ಒತ್ತಡದಿಂದ ಸಮಸ್ಯೆಗಳು ಉಂಟಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಮನವಿ ಮಾಡಿದೆ.

ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಅಧ್ಯಕ್ಷೆ ಕಿರಣಪ್ರಭಾ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಕಾರ್ಯದರ್ಶಿ ಪ್ರಮೀಳಾ ಶಕ್ತಿನಗರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!