ಮಂಗಳೂರು: ಎರಡು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಖ್ಯಾತ ಲೇಖಕ ಹಾಗೂ ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್ ಅವರ ಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಎ ಐ ಆಧಾರಿತ ‘ಅದಿತಿ’ ಚಲನಚಿತ್ರ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಿಕಾ ಭವನದ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಪ್ರದೀಪ್ ಕುಮಾರ್ ಅವರು 50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದು, ಅವುಗಳಲ್ಲಿ 30ಕ್ಕೂ ಅಧಿಕ ಕೃತಿಗಳು ‘ಸುಧಾ’, ‘ತರಂಗ’, ‘ಮಂಗಳ’, ‘ಕರ್ಮವೀರ’ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಜನಮೆಚ್ಚುಗೆ ಗಳಿಸಿವೆ ಎಂದು ಹೇಳಿದರು. ಅವರ ಜನಪ್ರಿಯ ಕಾದಂಬರಿ ‘ಮರಣ ಶಾಸನ’ ತೆಲುಗು ಭಾಷೆಗೆ ಅನುವಾದಗೊಂಡು ಅಲ್ಲಿಯೂ ಓದುಗರನ್ನು ಸೆಳೆದಿದೆ ಎಂದರು.
‘ಬದಲಾಗದವರು’ ಕಿರುಚಿತ್ರದ ಯಶಸ್ಸಿನ ಬಳಿಕ ಪ್ರದೀಪ್ ಕುಮಾರ್ ನಿರ್ದೇಶಿಸುತ್ತಿರುವ ಎರಡನೇ ಚಿತ್ರ ‘ಅದಿತಿ’ ಆಗಿದ್ದು, “ನಾರಿ ಮುನಿದರೆ ಸಾಮ್ರಾಜ್ಯವೇ ಧೂಳಿಪಟ” ಎಂಬ ಟ್ಯಾಗ್ಲೈನ್ ಹೊಂದಿದೆ. ಸಸ್ಪೆನ್ಸ್, ಆಕ್ಷನ್ ಹಾಗೂ ಭಾವನಾತ್ಮಕ ಪ್ರೇಮಕಥೆಯ ಸಂಯೋಜನೆಯಾಗಿರುವ ಈ ಚಿತ್ರವು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪಿ.ವಿ. ಪ್ರದೀಪ್ ಕುಮಾರ್, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪ್ರೋತ್ಸಾಹದಂತೆಯೇ ಚಿತ್ರರಂಗದಲ್ಲಿಯೂ ಮಾಧ್ಯಮಗಳ ಬೆಂಬಲ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು. ಆಧುನಿಕ ಎಐ ತಂತ್ರಜ್ಞಾನದ ಸಹಾಯದಿಂದ ಚಿತ್ರದ ದೃಶ್ಯಗಳನ್ನು ಕಲ್ಪಿಸಿಕೊಂಡು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರೇಮಂಡ್ ಡಿಕುನ್ಹ ತಾಕೋಡೆ, ಚಿತ್ರದ ನಿರ್ಮಾಪಕಿ ಸುನಿತಾ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.